ಸಾರಾಂಶ
ಹುಬ್ಬಳ್ಳಿ:
ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧದ ಮೊಕದ್ದಮೆ ಹಿಂಪಡೆದಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಇಲ್ಲದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸುವುದರೊಂದಿಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರು, ದೇವಸ್ಥಾನ, ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದಾರೆ. ವಿಡಿಯೋ ಸಾಕ್ಷ್ಯಗಳೊಂದಿಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಕೆಲವರು ಅಮಾಯಕರು. ಹೀಗಾಗಿ ಬಿಡುಗಡೆಗೆ ಕ್ರಮಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಇನ್ನೊಂದೆಡೆ ಕಾಂಗ್ರೆಸ್‌ನ ನಾಯಕರು ಈ ಪ್ರಕರಣದಲ್ಲಿ ಕೆಲವರು ಮಾತ್ರ ಅಪರಾಧಿಗಳಿದ್ದಾರೆ ಎಂದು ಹೇಳಿದ್ದಾರೆ. ಪರೋಕ್ಷವಾಗಿ ಆರೋಪಿತರಲ್ಲಿ ಅಪರಾಧಿಗಳೂ ಇದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಅಪರಾಧಿಗಳ ಖುಲಾಸೆಗೆ ಕ್ರಮಕೈಗೊಂಡಿದ್ದೇಕೆ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದರು.
ಸರ್ಕಾರದ ಇಂತಹ ನಿರ್ಧಾರದಿಂದ ಭಯೋತ್ಪಾದಕರಿಗೆ ಮತ್ತು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ರಾಜ್ಯದಲ್ಲಿ ರಹದಾರಿ ಸಿಕ್ಕಂತಾಗಿದೆ. ಈ ಹಿಂದೆ ಎಸ್‌ಡಿಪಿಐ-ಪಿಎಫ್‌ಐ ಸಂಘಟನೆಯ ಸಾವಿರಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಖುಲಾಸೆ ಮಾಡಿದೆ. ಈಗ 46 ಪ್ರಕರಣ ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಹಳೇಹುಬ್ಬಳ್ಳಿ ಪ್ರಕರಣವೂ ಒಂದಾಗಿದ್ದು, ಕೇವಲ ಮುಸ್ಲಿಂ ಸಮಾಜದ ಓಲೈಕೆಗೆ ಜನವಿರೋಧಿ ನೀತಿಗೆ ಮುಂದಾಗಿರುವುದು ಸರಿಯಲ್ಲ. ಅಧಿಕಾರದಲ್ಲಿ ಇದ್ದವರು ದುಷ್ಟಶಕ್ತಿಗಳನ್ನು ದಮನ ಮಾಡಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ಶಕ್ತಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂತಹ ಅಪರಾಧಿಗಳನ್ನು ಸರ್ಕಾರ ಬಿಡುಗಡೆಗೊಳಿಸುವ ಮೂಲಕ ಹುಬ್ಬಳ್ಳಿಯನ್ನು ದೇಶದ ಎರಡನೇ ಕಾಶ್ಮೀರವನ್ನಾಗಿಸುತ್ತಿದೆ. ದೇಶವಿರೋಧಿ ಶಕ್ತಿಗಳಿಗೆ ಸಹಕಾರ ನೀಡಿದರೆ ಮುಸ್ಲಿಮರು ನಮಗೆ ಬೆಂಬಲಿಸುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲೆ ಬಂದಿರುವ ಮುಡಾ ಪ್ರಕರಣವನ್ನು ಬೇರೆಡೆ ಸೆಳೆಯುವುದಕ್ಕಾಗಿಯೇ ಇದನ್ನು ಮುನ್ನಲೆಗೆ ತರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಈ ಮಧ್ಯೆ ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯುತ್ತಿರುವುದು ದುರ್ದೈವದ ಸಂಗತಿ. ಹಳೇಹುಬ್ಬಳ್ಳಿಯಲ್ಲಿ ನಡೆದಿದ್ದು ಕೋಮು ಗಲಭೆ, ಯಾವುದೇ ಹೋರಾಟವಲ್ಲ. ಇದು ಅಲ್ಪಸಂಖ್ಯಾತರು ಮತ್ತು ಪೊಲೀಸರ ಮಧ್ಯೆ ನಡೆದ ಗಲಭೆ. ಈ ವೇಳೆ ಪೊಲೀಸ್ ಠಾಣೆ, ದೇವಸ್ಥಾನ, ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಿದ್ದಾಗ ಪ್ರಕರಣ ಹಿಂಪಡೆದರೆ ಪೊಲೀಸರ ನೈತಿಕತೆ ಎಲ್ಲಿ ಉಳಿಯುತ್ತದೆ. ಮುಂದೆ ಇಂತಹ ಘಟನೆಗಳು ನಡೆದಾಗ ಪೊಲೀಸರು ಕೈಕಟ್ಟಿ ಕುಳಿತು ಅರಾಜಕತೆ ಉಂಟಾದರೆ, ನೇರವಾಗಿ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಆರೋಪಿಗಳನ್ನು ಮೇಲಿನ ದಾವೆ ಹಿಂಪಡೆದಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ರವಿ ನಾಯಕ ಸೇರಿದಂತೆ ಹಲವರಿದ್ದರು.