ಸಿನಿಮಾ ನಟರು ಸಮಾಜಕ್ಕೆ ಆದರ್ಶಪ್ರಾಯರಾಗಿ ಉಳಿಯಲಿ

| Published : Jun 20 2024, 01:20 AM IST / Updated: Jun 20 2024, 12:04 PM IST

ಸಾರಾಂಶ

ರೇಣುಕಾಸ್ವಾಮಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಶಿಕಾರಿಪುರದ ವಿವಿಧ ಸಂಘ-ಸಂಸ್ಥೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

 ಶಿಕಾರಿಪುರ : ಸಿನಿಮಾ ಕ್ಷೇತ್ರದಲ್ಲಿನ ಪ್ರತಿಯೊಬ್ಬರೂ ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು. ಸಮಾಜದಲ್ಲಿನ ಅಪರಾಧಿಗಳನ್ನು ತಿದ್ದುವ ಬಹು ಮಹತ್ವದ ಜವಾಬ್ದಾರಿಯನ್ನು ಹೊಂದಿದ ಚಲನಚಿತ್ರದ ನಾಯಕ ನಟರು ಹತ್ಯೆಯಂಥಹ ಹೇಯ ಕೃತ್ಯದಿಂದ ಬೆತ್ತಲೆಯಾಗಿದ್ದಾರೆ. ಕಾನೂನಿನಡಿಯಲ್ಲಿ ಎಲ್ಲ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂಬುದನ್ನು ಸರ್ಕಾರ,ನ್ಯಾಯಾಂಗ ವ್ಯವಸ್ಥೆ ಸಾಬೀತುಪಡಿಸಬೇಕಾಗಿದೆ ಎಂದು ಇಲ್ಲಿನ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎನ್.ವಿ.ಈರೇಶ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಅಖಿಲ ಭಾರತ ವೀರಶೈವ ಸಮಾಜ, ತಾಲೂಕು ಜಂಗಮ ಸಮಾಜ,ತಾ.ಅರ್ಚಕರು ಪುರೋಹಿತರ ಸಂಘ, ವಿಹಿಂಪ, ದ.ಸಂ.ಸ, ಕುರುಬ ಸಮಾಜ, ಆಟೋ ಚಾಲಕರ ಸಂಘ ಮತ್ತಿತರ ಸಂಘಟನೆಗಳ ವತಿಯಿಂದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ನಾಯಕ ನಟ ಹಾಗೂ ಹಣದ ಪ್ರಭಾವದಿಂದ ಎಲ್ಲವನ್ನೂ ನಿಭಾಯಿಸುವ ದರ್ಪದಲ್ಲಿ ರೇಣುಕಾಸ್ವಾಮಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈದಿರುವುದನ್ನು ವೀರಶೈವ ಸಮಾಜ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದ ಅವರು, ದಿಟ್ಟ ಪೊಲೀಸ್ ಅಧಿಕಾರಿಗಳು ಒತ್ತಡ ಪ್ರಭಾವಕ್ಕೆ ಒಳಗಾಗದೆ ಎಲ್ಲ ಆರೋಪಿಗಳ ಹೆಡೆಮುರಿ ಕಟ್ಟಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿದ್ದಾರೆ. ಇದರಿಂದಾಗಿ ಭಯಭೀತರಾದ ನಾಗರೀಕ ಸಮಾಜ ಅಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ ಭವಿಷ್ಯದಲ್ಲಿ ಇಂತಹ ದುರ್ಘಟನೆ ಪುನರಾವರ್ತನೆಯಾಗದಂತೆ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮದ ಮೂಲಕ ಗಲ್ಲುಶಿಕ್ಷೆ ವಿಧಿಸಿ ಜನಸಾಮಾನ್ಯರಲ್ಲಿ ಕಾನೂನಿನಡಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ರವಾನಿಸುವಂತೆ ಒತ್ತಾಯಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಶಿಧರಸ್ವಾಮಿ ಕಣಿವೆಮನೆ ಮಾತನಾಡಿ, 12ನೇ ಶತಮಾನದಲ್ಲಿ ಶರಣ ಶರಣೆಯರು ಸಮಾಜದಲ್ಲಿ ಹೆಚ್ಚಾಗಿದ್ದ ಅನ್ಯಾಯ ಅಧರ್ಮದ ವಿರುದ್ಧ ಹೋರಾಡಿದ್ದು, ಇಂತಹ ನಾಡಿನಲ್ಲಿ ಯಃಕಶ್ಚಿತ್ ತಪ್ಪಿಗೆ ಅತ್ಯಂತ ಹೇಯವಾಗಿ ನಾಗರೀಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಹತ್ಯೆಗೈದ ಎಲ್ಲ ಅಪರಾಧಿಗಳು ಕ್ಷಮೆಗೆ ಅನರ್ಹರಾಗಿದ್ದು, ಗಲ್ಲು ಶಿಕ್ಷೆ ಮೂಲಕ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ತಾ.ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ವೀರಶೈವ ಸಮಾಜದ ಪ್ರ.ಕಾ ಅಶ್ವಿನ್ ಕಡ್ಡಿಪುಡಿ, ದ.ಸಂ.ಸ ತಾ.ಅಧ್ಯಕ್ಷ ಜಗದೀಶ್ ಚುರ್ಚುಗುಂಡಿ ಮತ್ತಿತರರು ಘಟನೆಯನ್ನು ಖಂಡಿಸಿ ಮಾತನಾಡಿದರು.ನಂತರದಲ್ಲಿ ತಹಸೀಲ್ದಾರ್ ಮೂಲಕ ಎಲ್ಲ ಅಪರಾಧಿಗಳಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ್, ತಾ.ಮಹಿಳಾ ಘಟಕದ ಅಧ್ಯಕ್ಷೆ ಕಾಂಚನಾ ಕುಮಾರ್,ಮುಖಂಡ ಶಿವಾನಂದಯ್ಯಸ್ವಾಮಿ, ವಸಂತಗೌಡ, ಭೋಜರಾಜ ಪಾಟೀಲ್, ರುದ್ರಯ್ಯ, ಮಂಜೇಶ್, ಶಿವಪ್ಪಯ್ಯ, ಪಿ.ಎನ್.ವಿಶ್ವನಾಥ್, ಚನ್ನೇಶ್, ವೀರೇಶ್, ಜಗದೀಶ್ ಈಸೂರು, ದೊಡ್ಡೇಶ್ ಕಾಗಿನಲ್ಲಿ ಸಹಿತ ನೂರಾರು ಪ್ರತಿಭಟನಾಕಾರರರು ಭಾಗವಹಿಸಿದ್ದರು.

ಆರಂಭದಲ್ಲಿ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬಸ್ ನಿಲ್ದಾಣ ಮೂಲಕ ತಾಲೂಕು ಕಚೇರಿಗೆ ಆಗಮಿಸಿದರು.