ಸಾರಾಂಶ
ಜಗತ್ತಿನ ಮುಂದುವರಿದ ದೇಶಗಳು ನಮ್ಮ ಸಂಸ್ಕೃತಿ ಅಳವಡಿಸಿಕೊಂಡಿವೆ. ನಾವು ಕೂಡ ನಮ್ಮ ಸಂಸ್ಕೃತಿ ಬೆಳೆಸಬೇಕಿದೆ. ಡಿಜೆ ಹಚ್ಚಿದರೆ ಎಷ್ಟು ಜನಾ ಸೇರುತ್ತಾರೆ ಅದಕ್ಕಿಂತ ಹೆಚ್ಚು ಜನರು, ಜಗ್ಗಲಗಿ ಹಬ್ಬಕ್ಕೆ ಬರುತ್ತಿದ್ದಾರೆ.
ಹುಬ್ಬಳ್ಳಿ:
ಜನಪದ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಅವರು ಇಲ್ಲಿನ ಜಯಚಾಮರಾಜ ನಗರದ ಅಕ್ಕನ ಬಳಗದಲ್ಲಿ ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜರುಗಿದ ಮೂಲ ಜನಪದ ಹಾಡು, ಹಾಡುಗಾರಿಕೆ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನಪದ ಕಲೆ ನಶಿಸಿ ಹೋಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ಕಳೆದ ಒಂದು ವಾರದಿಂದ ಅಕ್ಕನ ಬಳಗದಲ್ಲಿ ಅತ್ಯುತ್ತಮ ಕಾರ್ಯಕ್ರಮ ನಡೆಸಿರುವುದು ಹಾಗೂ ವಿಶೇಷವಾಗಿ ಮಹಿಳೆಯರಿಗೆ ಸೇರಿಸಿ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ಸಂಗತಿ. ಹೆಣ್ಣು ಗರ್ಭಿಣಿ ಆದಾಗಿನಿಂದ ಮಣ್ಣಾಗುವ ವರೆಗೆ ಜಾನಪದ ಇದೆ. ಈ ಕಲೆ ಬೆಳೆಸಿ, ಉಳಿಸಬೇಕು ಎಂದು ಕರೆ ನೀಡಿದರು.ಇಂದು ಜಗ್ಗಲಗಿ ಹಬ್ಬ ಜನಪದ ಕಲೆ ಉಳಿಸಲು ಸಹಕಾರಿಯಾಗಿದೆ. ಜಗತ್ತಿನ ಮುಂದುವರಿದ ದೇಶಗಳು ನಮ್ಮ ಸಂಸ್ಕೃತಿ ಅಳವಡಿಸಿಕೊಂಡಿವೆ. ನಾವು ಕೂಡ ನಮ್ಮ ಸಂಸ್ಕೃತಿ ಬೆಳೆಸಬೇಕಿದೆ. ಡಿಜೆ ಹಚ್ಚಿದರೆ ಎಷ್ಟು ಜನಾ ಸೇರುತ್ತಾರೆ ಅದಕ್ಕಿಂತ ಹೆಚ್ಚು ಜನರು, ಜಗ್ಗಲಗಿ ಹಬ್ಬಕ್ಕೆ ಬರುತ್ತಿದ್ದಾರೆ ಎಂದರು.ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಅಪ್ಪಗೆರಿ ತಿಮ್ಮರಾಜು ಮಾತನಾಡಿ, ಜಾನಪದ ಕಲೆಗಳು ಉಳಿದರೆ ಮಾತ್ರ ದೇಶ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೂಲ ಜಾನಪದ ಕಲೆಯನ್ನು ನಾವೆಲ್ಲರೂ ಹೆಚ್ಚು ಬಳಸಬೇಕು ಎಂದು ಹೇಳಿದರು.ಹಿರಿಯ ಜಾನಪದ ಕಲಾವಿದ ಡಾ. ರಾಮು ಮೂಲಗಿ ಮಾತನಾಡಿದರು. ಇದೇ ವೇಳೆ ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಅಪ್ಪಗೆರಿ ತಿಮ್ಮರಾಜು ಅವರನ್ನು ಸನ್ಮಾನಿಸಲಾಯಿತು. ಪಾಲಿಕೆಯ ಮೇಯರ ವೀಣಾ ಭಾರದ್ವಾಡ, ಅಕ್ಕನ ಬಳಗದ ಅಧ್ಯಕ್ಷೆ ಗೀತಕ್ಕ ಮುಳ್ಳಳ್ಳಿ, ಗದಗಯ್ಯ ಹಿರೇಮಠ, ಸಂದ್ಯಾ ದೀಕ್ಷಿತ್, ಪದ್ಮಜಾ ಉಮರ್ಜಿ ಸೇರಿದಂತೆ ಹಲವರಿದ್ದರು.