ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಸತ್ಯ, ಶಾಂತಿ, ಅಹಿಂಸೆಯ ಸಂದೇಶ ಸಾರುವ ಗಾಂಧೀಜಿಯವರ ವಿಚಾರಧಾರೆಗಳು ವಿಶ್ವದಾದ್ಯಾಂತ ಪಸರಿಸಲಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ವತಿಯಿಂದ ಹಮ್ಮಿಕೊಳ್ಳಲಾದ ಮಹಾತ್ಮ ಗಾಂಧೀಜಿ 155ನೇ ಜಯಂತಿ ಅಂಗವಾಗಿ ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಹಿಂಸೆ ಮತ್ತು ಸತ್ಯವನ್ನು ಬಳಸಿಕೊಂಡು ಶಾಂತಿಯುತ ಮಾರ್ಗಗಳ ಮೂಲಕ ಸ್ವಾತಂತ್ರ್ಯವನ್ನು ಸಾಧಿಸುವ ಗಾಂಧಿಜೀಯ ನಂಬಿಕೆಯು ಅವರನ್ನು ಪ್ರತ್ಯೇಕಿಸಿದೆ ಎಂದು ಹೇಳಿದರು.
ಈ ವೇಳೆ ಸಂಸದ ಕುಮಾರ ನಾಯಕ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ್, ಎಸ್‌ಪಿ ಎಂ.ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿ ಶಿವಾನಂದ, ತಹಸೀಲ್ದಾರ್ ಸುರೇಶ್ ವರ್ಮ ಸೇರಿ ವಿವಿಧ ಪಕ್ಷಗಳ ಮುಖಂಡರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಸಚಿವರಿಂದ ಪ್ರಶಸ್ತಿ ವಿತರಣೆ
ರಾಯಚೂರು: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎನ್.ಎಸ್ ಬೋಸರಾಜು ವಿತರಿಸಿದರು.
ಪ್ರೌಢ ಶಾಲೆ ವಿಭಾಗದಲ್ಲಿ ದೇವದುರ್ಗ ತಾಲೂಕಿನ ಮಸರಕಲ್ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಾಧಿಕಾ ನಿಂಗಯ್ಯ ಪ್ರಥಮ ಸ್ಥಾನ, ರಾಯಚೂರಿನ ಬಸವಶ್ರೀ ಪ್ರೌಢ ಶಾಲೆಯ ವಿದ್ಯಾರ್ಥಿ ಶ್ರೇಯಾ ಆರ್.ಜೆ ದ್ವಿತೀಯ ಸ್ಥಾನ, ಸಿಂಧನೂರಿನ ಆರ್‌ಜೆಎಂ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಯಶೋದಾ ಬಸವರಾಜ ತೃತೀಯ ಸ್ಥಾನ ಪಡೆದಿದ್ದಾರೆ.*ಪಿಯುಸಿ ವಿಭಾಗ:
ಮಾನವಿ ಜಿಲ್ಲೆಯ ಮಾನ್ವಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸುದೀಪ್ ನರಸಪ್ಪ ಪ್ರಥಮ ಸ್ಥಾನ, ಜಿಲ್ಲೆಯ ಪೋತ್ನಾಳ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಮಹೇಶ್ವರಿ ಮಲ್ಲಯ್ಯ ದ್ವಿತೀಯ ಸ್ಥಾನ, ರಾಯಚೂರಿ ಪ್ರಮಾಣು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಜೀವಿತಾ ತೃತೀಯ ಸ್ಥಾನ.*ಸ್ನಾತಕೋತ್ತರ ವಿಭಾಗ:
ರಾಯಚೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಾದ ಪ್ರಮೋದ ಪ್ರಥಮ ಸ್ಥಾನ, ಸದಾಶಿವ ದ್ವಿತೀಯ ಸ್ಥಾನ, ಪ್ರೋತ್ನಾಳ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿನಿ ಐಶ್ವರ್ಯ ಬಸವಲಿಂಗಪ್ಪ ತೃತೀಯ ಸ್ಥಾನ ಪಡೆದಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
ರಾಯಚೂರು: ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ನಿಮಿತ್ತ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಗಾಂಧಿ ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸಿ ಸ್ವಚ್ಛತಾ ನಡಿಗೆ ಜಾಥಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗಾಂಧೀಜಿಯವರ ತತ್ವಗಳು ಹಾಗೂ ಅವರು ನೀಡಿರುವ ಮಾರ್ಗವನ್ನು ನಾವೆಲ್ಲ ಪಾಲಿಸಬೇಕು. ನಮ್ಮ ದಿನನಿತ್ಯದ ಕೆಲಸದಲ್ಲಿ, ಜೀವನದಲ್ಲಿ ಅಳವಡಿಸಬೇಕು ಎಂದರು.ರಾಯಚೂರು ನಗರದ ಸ್ವಚ್ಛತೆಯನ್ನು ಹೆಚ್ಚಿನ ರೀತಿಯಲ್ಲಿ ಸುಧಾರಣೆ ಮಾಡಬೇಕು. ನಮ್ಮ ನಗರವನ್ನು ಸ್ವಚ್ಛವಾಗಿ ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದದರು.