ಸಾರಾಂಶ
ಭಟ್ಕಳ: ಮನುಷ್ಯನಾದವನು ತನ್ನ ಧರ್ಮವನ್ನು ಸರಿಯಾಗಿ ಪಾಲಿಸಬೇಕು. ಮಠ ಮಾನ್ಯವನ್ನು ಬೆಳೆಸುವ ಕಾರ್ಯ ಮಾಡುವ ಜತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಜಿರೆಯ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಕರಿಕಲ್ ಶ್ರೀರಾಮ ಧ್ಯಾನಮಂದಿರದಲ್ಲಿ ತಮ್ಮ 12ನೇ ದಿನದ ಚಾತುರ್ಮಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ ಕಾರ್ಯವನ್ನು ಈ ಹಿಂದೆ ಹಿಂದೆ ಮೇಲ್ವರ್ಗದವರಷ್ಟೇ ಮಾಡುತ್ತಿದ್ದರು. ಆದರೆ ಈಗ ಹಿಂದುಳಿದ ವರ್ಗದವರೂ ಧಾರ್ಮಿಕ ಕಾರ್ಯ ಕೈಗೊಳ್ಳುವ ಮೂಲಕ ಅವರಿಗೂ ಸಮಾಜದಲ್ಲಿ ಶಿಸ್ತು, ಗೌರವ ಪ್ರಾಪ್ತವಾಗುವಂತಾಗಿದೆ. ಜನರು ಸಂಸ್ಕಾರವನ್ನು ಪಾಲಿಸಬೇಕೆಂಬ ಸದುದ್ದೇಶದಿಂದಲೇ ಈ ಚಾತುರ್ಮಾಸ್ಯ ಹಮ್ಮಿಕೊಳ್ಳಲಾಗಿದೆ ಎಂದರು.ಮನುಷ್ಯನು ಮೊದಲು ತಾನೇ ಶ್ರೇಷ್ಠ ಎಂಬ ಮೋಹ ಬಿಡಬೇಕು. ಅಂದಾಗ ಮಾತ್ರ ಭಕ್ತಿಯ ಮಹತ್ವ ತಿಳಿಯುತ್ತದೆ. ಪ್ರತಿಯೊಬ್ಬರೂ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಶಾಸಕರಿಗೆ ಶಾಲು ಹೊದೆಸಿ ಗೌರವಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಪ್ರಮುಖರಾದ ಸೂರಜ್ ನಾಯ್ಕ ಸೋನಿ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ, ಸ್ವಾಗತ ಸಮಿತಿ ಸಂಚಾಲಕ ಕೃಷ್ಣಾ ನಾಯ್ಕ ಪ್ರಥ್ವಿ, ವಿಠಲ್ ನಾಯ್ಕ, ಸುಬ್ರಾಯ ನಾಯ್ಕ, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ, ಆರ್.ಜಿ. ನಾಯ್ಕ ಕುಮಟಾ, ಕುಮಟಾ ತಾಲೂಕು ನಾಮಧಾರಿ ಅಧ್ಯಕ್ಷ ಮಂಜುನಾಥ ನಾಯ್ಕ, ಶ್ರೀನಿವಾಸ ನಾಯ್ಕ ಶಿರಸಿ ಮತ್ತಿತರರಿದ್ದರು.೧೨ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಿನ ನಾಮಧಾರಿ ಸಮಾಜದವರು ಹೊರೆಕಾಣಿಕೆ ನೀಡಿ ಒಂದು ದಿನದ ಸೇವೆ ಸಲ್ಲಿಸಿದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ದಿನಂಪ್ರತಿ ಭಟ್ಕಳ ಸೇರಿದಂತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಜು. 29ರಿಂದ ವಿದ್ವಾನ್ ಹಂದಲಸುವ ಎಲ್. ವಾಸುದೇವ ಭಟ್ ಅವರಿಂದ ಸಂಜೆ ಶ್ರೀಮದ್ಭಾಗವತ ಸಪ್ತಾಹ ನಡೆಯುತ್ತಿದೆ.ಬ್ರಹ್ಮಾನಂದ ಶ್ರೀ ಆಶೀರ್ವಾದ ಪಡೆದ ಸಚಿವ ಮಧು ಬಂಗಾರಪ್ಪಭಟ್ಕಳ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕರಿಕಲ್ ಶ್ರೀರಾಮ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಚಾತುರ್ಮಾಸ ವ್ರತದಲ್ಲಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.ಸ್ವಾಮೀಜಿಯವರು ಸಚಿವರಿಗೆ ಮಂತ್ರಾಕ್ಷತೆ ನೀಡಿ ಗೌರವಿಸಿದರು. ನಂತರ ಸಚಿವರು ಸುದ್ದಿಗಾರರ ಜತೆ ಮಾತನಾಡಿ, ಕರಿಕಲ್ ಧ್ಯಾನಮಂದಿರದಲ್ಲಿ ಬ್ರಹ್ಮಾನಂದ ಸ್ವಾಮೀಜಿಯವರು 41 ದಿನಗಳ ಚಾತುರ್ಮಾಸ ವ್ರತಾಚರಣೆಯನ್ನು ನಡೆಸುತ್ತಿದ್ದು, ಕಾರ್ಯಕ್ರಮವನ್ನು ಭಕ್ತರು ಬಹಳ ಅಚ್ಚುಕಟ್ಟಿನಿಂದ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಶ್ರೀಗಳು ಹಮ್ಮಿಕೊಂಡಿರುವ ಚಾತುರ್ಮಾಸ ವ್ರತವನ್ನು ಯಶಸ್ವಿಗೊಳಿಸಲು ಸದ್ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.ಈ ಹಿಂದೆ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಶ್ರೀಗಳ ಚಾತುರ್ಮಾಸ ವ್ರತದಲ್ಲಿ ತಾವು ಪಾಲ್ಗೊಂಡಿದ್ದು, ಇದೀಗ ಸಚಿವರಾಗಿ ಕರಿಕಲ್‌ನ ಚಾತುರ್ಮಾಸ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದೇನೆ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ಸಿದ್ದಾಪುರದ ವಿ.ಆರ್. ನಾಯ್ಕ, ಶಿರಸಿಯ ಶ್ರೀನಿವಾಸ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಸಂಚಾಲಕ ಕೃಷ್ಣಾ ನಾಯ್ಕ ಪೃಥ್ವಿ, ವಾಮನ ನಾಯ್ಕ ಮಂಕಿ, ವಿಠಲ್ ನಾಯ್ಕ, ಎಂ.ಡಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.