ಲೋಕಸಭೆಗೆ ತುಮಕೂರಿನಿಂದ ಎಚ್‌ಡಿಕೆ ಸ್ಪರ್ಧಿಸಲಿ

| Published : Mar 06 2024, 02:22 AM IST

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷವೇ ಉಳಿಸಿಕೊಂಡು ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಬೇಕು ಅಥವಾ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಯಿತು

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷವೇ ಉಳಿಸಿಕೊಂಡು ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಬೇಕು ಅಥವಾ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಯಿತು ಎಂದು ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಅಸ್ತಿತ್ವದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಟರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿ ದ್ದಾರೆ. ಆದರೆ ತುಮಕೂರು ಲೋಕಸಭಾಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ 2019ರ ಲೋಕಸಭಾ ಚುನಾವಣೆ ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿರುವ ಕಾರಣ, ಕ್ಷೇತ್ರವನ್ನುಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಂಡು, ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಬೇಕು ಇಲ್ಲವೇ ಜೆಡಿಎಸ್ ಪಕ್ಷದ ಆಕಾಂಕ್ಷಿಗಳಿಗೆ ನೀಡಬೇಕೆಂಬ ಸಲಹೆಯನ್ನು ಪಕ್ಷದ ಮುಖಂಡರು ನೀಡಿದ್ದಾರೆ. ಮೈತ್ರಿ ವೇಳೆ ಬದಲಾದರೂ ಪಕ್ಷದ ತಿರ್ಮಾನಕ್ಕೆ ಬದ್ಧರಾಗಿರುವ ಭರವಸೆಯನ್ನು ಸಹ ಮುಖಂಡರು ಕಾರ್ಯಕರ್ತರು ನೀಡಿದ್ದಾರೆ ಎಂದರು.

ಜೆಡಿಎಸ್‌ ಚುನಾವಣೆಯಲ್ಲಿ ಕೇಸರಿ ಶಾಲು ಧರಿಸಿ ಚುನಾವಣಾ ಪ್ರಚಾರ ಮಾಡಲ್ಲ. ಮಂಡ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅನಿವಾರ್ಯ ವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿದ್ದರು. ನಮ್ಮದು ಹಸಿರು ಶಾಲು. ಮೈತ್ರಿ ಮಾಡಿಕೊಂಡಿದ್ದರೂ ಪಕ್ಷದ ತತ್ವ, ಸಿದ್ಧಾತಗಳನ್ನು ಬಿಡುವುದಿಲ್ಲ ಎಂದು ತಿಪ್ಪೇಸ್ವಾಮಿ ಸ್ಪಷ್ಟಪಡಿಸಿದರು.

ತುಮಕೂರು ಲೋಕಸಭಾ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ, ಇಂದಿನ ಸಭೆಯ ತೀರ್ಮಾನದಂತೆ ಜೆಡಿಎಸ್‌ ಅಭ್ಯರ್ಥಿ ಇಲ್ಲವೇ, ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನುಕಣಕ್ಕೆ ಇಳಿಸಬೇಕೆಂಬುದು ಆಶಯವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲೋಕಸಭಾ ಚುನಾವಣೆಯ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಗೋಪಾಲಯ್ಯ ಅವರೊಂದಿಗೆ ಕುಳಿತು ಚರ್ಚೆ ಮಾಡಿ, ವರಿಷ್ಟರಿಗೆ ಮನವ ರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುವುದು. ನಮ್ಮಲ್ಲಿ ಮಾಜಿ ಶಾಸಕ ಡಿ.ನಾಗರಾಜಯ್ಯ, ತಿಪಟೂರಿನ ಶಾಂತಕುಮಾರ್, ಮಾಜಿ ಐಪಿಎಸ್‌ ಅಧಿಕಾರಿ ಜೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಒಂದು ವೇಳೆ ಪಕ್ಷ ತೀರ್ಮಾನಿಸಿದರೆ ನಾನು ಸಹ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಸುರೇಶಬಾಬು ತಿಳಿಸಿದರು.ಕಳೆದ ವಿಧಾನಸಭಾ ಚುನಾವಣೆ ವೇಳೆ ಎಸ್.ಆರ್.ಶ್ರೀನಿವಾಸ್ ಮತ್ತು ಚುನಾವಣೆ ನಂತರ ಡಿ.ಸಿ.ಗೌರಿಶಂಕರ್ ಅವರು ಪಕ್ಷ ಬಿಟ್ಟಿದ್ದಾರೆ. ಆದರೆ ಕಾರ್ಯಕರ್ತರು ಪಕ್ಷ ತೊರೆದಿಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಇಂತಹ ಹತ್ತಾರು ನಾಯಕರನ್ನು ಹುಟ್ಟು ಹಾಕುವ ಶಕ್ತಿ ಹೊಂದಿದ್ದಾರೆ. ಬಿಜೆಪಿ ಯಿಂದ ಜೆ.ಸಿ.ಮಾಧುಸ್ವಾಮಿಗೆ ಟಿಕೇಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ ಅವಕಾಶ ಸಿಕ್ಕರೆ ಮಾಧುಸ್ವಾಮಿ ಸಹ ನಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ. ಮೈತ್ರಿಧರ್ಮ ಪಾಲಿಸುವುದು ಇಬ್ಬರಿಗೂ ಅನಿವಾರ್ಯಎಂದರು.

ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಂಜನಪ್ಪ ಮಾತನಾಡಿ, ಜೆಡಿಎಸ್ ಪಕ್ಷದಿಂದ ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿ ಮಾಡಿಕೊಳ್ಳಲಾ ಗಿದೆ. ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಲಾಗಿದೆ. ಅಲ್ಲದೆ ಕ್ಷೇತ್ರದ ಉಸ್ತುವಾರಿಗಳಾಗಿ ಶಾಸಕರಾದ ಸಿ.ಬಿ.ಸುರೇಶಬಾಬು ಅಧ್ಯಕ್ಷತೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಸುರೇಶಬಾಬು, ನಾನು ಸಹ ಇದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರು, ಮುಖಂಡ ಸಭೆ ಕರೆದು ಚರ್ಚೆ ನಡೆಸಿ, ಮೈತ್ರಿಯ ಅನಿವಾರ್ಯತೆ ಮತ್ತು ನಮ್ಮಗುರಿ ಎರಡನ್ನು ತಿಳಿಸಿ, ನಮ್ಮ ವರಿಷ್ಠರ ಸೋಲಿಗೆ ಕಾರಣರಾದವರನ್ನು ಸೋಲಿಸಲು ಮುಖಂಡರ ಜೊತೆಗೆ ಕಾರ್ಯಕರ್ತರು ಒಂದಾಗಿ ಕೆಲಸ ಮಾಡುವಂತೆ ಮನವೊಲಿಸಲಿದ್ದೇವೆ ಎಂದರು.

ತಿಪಟೂರಿನ ಕೆ.ಟಿ.ಶಾಂತಕುಮಾರ್ ಮಾತನಾಡಿ, ಪಕ್ಷದ ಮುಖಂಡರ ತೀರ್ಮಾನದಂತೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುವುದು. ಎಚ್.ಡಿ.ಕುಮಾರಸ್ವಾಮಿ ಒಪ್ಪಿದರೆ ಅವರೇ ಸ್ಪರ್ಧಿಸಲಿದ್ದಾರೆ. ಇಲ್ಲವೇ ಪಕ್ಷಕ್ಕಾಗಿ ದುಡಿದಿರುವ ನನಗೆ ಟಿಕೇಟ್ ನೀಡಬೇಕೆಂಬ ಮನವಿಯನ್ನು ಹೈಕಮಾಂಡ್ ಮುಂದೆ ಇಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿಜೆಡಿಎಸ್ ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ಸುಧಾಕರಲಾಲ್, ಗೋವಿಂದರಾಜು, ಜೋತಿಪ್ರಕಾಶ್ ಮಿರ್ಜಿ, ಸೋಲಾರ್ ಕೃಷ್ಣಮೂರ್ತಿ, ಟಿ.ಆರ್.ನಾಗರಾಜು, ವಿಜಯಗೌಡ,ಉಗ್ರೇಶ್, ಎಸ್.ಆರ್.ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.