ಆರೋಗ್ಯ ರಕ್ಷಣೆಗೆ ಮೊದಲ ಪ್ರಾಶಸ್ತ್ಯ ಇರಲಿ: ಮಾಜಿ ಸಚಿವ ಮಾಧುಸ್ವಾಮಿ

| Published : Mar 06 2025, 12:36 AM IST

ಸಾರಾಂಶ

ಒಂದು ಕಾಲದಲ್ಲಿ ದಾನ ಶ್ರೇಷ್ಠ ಎಂಬ ಭಾವನೆ ಇತ್ತು. ಆದರೆ, ಪ್ರಸ್ತುತ ಆರೋಗ್ಯ ಸೇವೆ, ಕಾಳಜಿಯೇ ಉತ್ತಮ ಪಂಕ್ತಿಯಲ್ಲಿ ನಿಲ್ಲುತ್ತಿದೆ. ಹಾಗಾಗಿ, ಆರೋಗ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ಇರಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

- ಉಕ್ಕಡಗಾತ್ರಿಯಲ್ಲಿ ಎಸ್‌.ಎಸ್. ಕೇರ್ ಟ್ರಸ್ಟ್‌ನಿಂದ ಆರೋಗ್ಯ ಶಿಬಿರ- - - ಮಲೇಬೆನ್ನೂರು: ಒಂದು ಕಾಲದಲ್ಲಿ ದಾನ ಶ್ರೇಷ್ಠ ಎಂಬ ಭಾವನೆ ಇತ್ತು. ಆದರೆ, ಪ್ರಸ್ತುತ ಆರೋಗ್ಯ ಸೇವೆ, ಕಾಳಜಿಯೇ ಉತ್ತಮ ಪಂಕ್ತಿಯಲ್ಲಿ ನಿಲ್ಲುತ್ತಿದೆ. ಹಾಗಾಗಿ, ಆರೋಗ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ಇರಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಇಲ್ಲಿಗೆ ಸಮೀಪದ ಉಕ್ಕಡಗಾತ್ರಿಯಲ್ಲಿ ಮಂಗಳವಾರ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಜಾತ್ರೆ ನಿಮಿತ್ತ ದಾವಣಗೆರೆಯ ಎಸ್‌.ಎಸ್. ಕೇರ್ ಟ್ರಸ್ಟ್ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಉತ್ತಮವಾಗಿದ್ದರೆ ದಾನ, ಧರ್ಮ, ಜ್ಞಾನ ಎಲ್ಲ ಸೇವೆಗಳೂ ಸಾಧ್ಯವಾಗಬಲ್ಲವು ಎಂದರು.

ಉಳ್ಳವರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ, ಬಡವರು, ನಿರ್ಗತಿಕರ ಆರೋಗ್ಯದ ಬಗ್ಗೆ ಸಂಘ ಸಂಸ್ಥೆಗಳು ಕಾಳಜಿ ವಹಿಸುವ ಜರೂರು ಅಗತ್ಯವಾಗಿದೆ. ನಾಗರೀಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಉಚಿತ ಚಿಕಿತ್ಸಾ ಶಿಬಿರ ಆಯೋಜನೆ ಇತರರಿಗೂ ಮಾದರಿ ವಿಚಾರವಾಗಿದೆ ಎಂದರು.

ಗದ್ದಿಗೆ ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ಮಾತನಾಡಿ, ಮನುಷ್ಯರಿಗೆಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಮುಖ್ಯವಾಗಿದೆ. ದಿನವೂ ನೂರಾರು ಭಕ್ತರು ಆಗಮಿಸುವ ಈ ಕ್ಷೇತ್ರದಲ್ಲಿ ನಿರಂತರವಾಗಿ ಇಂಥ ಸಮಾಜಮುಖಿ ಶಿಬಿರಗಳನ್ನು ಏರ್ಪಡಿಸಲು ಸಹಕಾರ ನೀಡುತ್ತೇವೆ ಎಂದರು.

ಟ್ರಸ್ಟಿ ಇಂದೂಧರ್, ಡಾ.ಪುನೀತ್, ಡಾ. ಪ್ರಶಾಂತ್. ಹರೀಶ್, ಗದಿಗೆಯ್ಯ ಪಾಟೀಲ್, ವಕೀಲ ತಿಮ್ಮನಗೌಡ, ಶೋಭಾ ಇದ್ದರು. ೧೮೦ಕ್ಕೂ ಹೆಚ್ಚು ನಾಗರೀಕರು ಶಿಬಿರದ ಪ್ರಯೋಜನ ಪಡೆದರು. ಮಾಧುಸ್ವಾಮಿ ಮತ್ತು ಪತ್ನಿ ತ್ರಿವೇಣಿ ದಂಪತಿ ಕರಿಬಸವೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು.

- - - -೫-ಎಂಬಿಆರ್೧.ಜೆಪಿಜಿ: ಶಿಬಿರದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಮಾತನಾಡಿದರು.