ಹೆಲ್ಮೆಟ್‌ ನಮ್ಮ ಬದುಕಿನ ಭಾಗ ಆಗಲಿ: ಎಸ್ಪಿ ಜಾಹ್ನವಿ

| Published : Aug 01 2025, 12:30 AM IST

ಹೆಲ್ಮೆಟ್‌ ನಮ್ಮ ಬದುಕಿನ ಭಾಗ ಆಗಲಿ: ಎಸ್ಪಿ ಜಾಹ್ನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದಲ್ಲಿ ನಡೆದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಎಸ್ಪಿ ಎಸ್. ಜಾಹ್ನವಿ ಹಸಿರು ನಿಶಾನೆ ತೋರಿದರು.

ಹೊಸಪೇಟೆಯಲ್ಲಿ ಹೆಲ್ಮೆಟ್‌ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದಲ್ಲಿ ನಡೆದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಎಸ್ಪಿ ಎಸ್. ಜಾಹ್ನವಿ ಹಸಿರು ನಿಶಾನೆ ತೋರಿದರು.

ನಗರದ ವಡಕರಾಯ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ಮೇನ್ ಬಜಾರ್ ಮೂಲದ ಸಾಗಿ ನಗರದ ವಿವಿಧೆಡೆ ಸಾಗಿ ಬಂದಿತು. ನಗರದಲ್ಲಿ ಸಾಗಿ ಬಂದ ಮೆರವಣಿಗೆ ನಗರದ ಪಟ್ಟಣ ಪೊಲೀಸ್‌ ಠಾಣೆ ಆವರಣದಲ್ಲಿ ಕೊನೆಗೊಂಡಿತು.

ಈ ವೇಳೆ ಎಸ್ಪಿ ಎಸ್. ಜಾಹ್ನವಿ ಮಾತನಾಡಿ, ಹೆಲ್ಮೆಟ್ ಧರಿಸುವುದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಎಂಬುದನ್ನು ಮರೆಯಬಾರದು. ನಾವು ಕುಟುಂಬದ ಸುರಕ್ಷತೆಗಾಗಿ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಹೆಲ್ಮೆಟ್‌ ಇದ್ದರೂ ಕೈಯಲ್ಲಿ ಹಿಡಿದುಕೊಂಡು ಶೋಕಿಗಾಗಿ ತಿರುಗಾಡುತ್ತಾರೆ. ಅದೇ ಪೊಲೀಸರು ಕಂಡೊಡನೆ ಗಾಬರಿಗೊಂಡು ಹೆಲ್ಮೆಟ್‌ ಧರಿಸುತ್ತಾರೆ. ಈ ನೆಲದ ಕಾನೂನನ್ನು ನಾವೇ ಪರಿ ಪಾಲನೆ ಮಾಡಲ್ಲ ಎಂದರೆ, ಇನ್ನೂ ಯಾರು ಪಾಲನೆ ಮಾಡಬೇಕು. ಜವಾಬ್ದಾರಿಯುತ ನಾಗರಿಕರಾಗಿ ನಾವು ಮೊದಲು ಹೆಲ್ಮೆಟ್‌ ಧರಿಸುವುದನ್ನು ಕಲಿಯಬೇಕು. ಒಂದು ವೇಳೆ ಹೆಲ್ಮೆಟ್‌ ಧರಿಸದೇ ಇದ್ದರೆ, ಪೊಲೀಸರು ದಂಡ ವಿಧಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದರು.

ನಾವೆಲ್ಲರೂ ಮೊದಲು ಹೆಲ್ಮೆಟ್‌ ಧರಿಸಿಕೊಂಡು ತಿರುಗಾಡಬೇಕು. ಪೊಲೀಸರು ಕೂಡ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸರ್ಕಾರಿ ನೌಕರರು, ಪತ್ರಕರ್ತರು ಹೆಲ್ಮೆಟ್‌ ಧರಿಸಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜದಲ್ಲಿ ಮೊದಲು ಬದಲಾವಣೆ ತರಬೇಕಿದೆ. ಹಾಗಾಗಿ ಪ್ರತಿಯೊಬ್ಬರು ಹೆಲ್ಮೆಟ್‌ ಧರಿಸುವುದನ್ನು ರೂಢಿ ಮಾಡೋಣ. ಸಣ್ಣ ಅಪಘಾತವಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನಾವು ಹೆಲ್ಮೆಟ್‌ ಹಾಕಿಕೊಂಡರೆ ಪ್ರಾಣ ಉಳಿಸಬಹುದು. ತಲೆಗೆ ಪೆಟ್ಟು ಬಿದ್ದು, ಮೆದುಳಿಗೆ ರಕ್ತ ಹೋಗದಂತೆ ತಡೆಯಬಹುದು. ಆದರೆ, ಹಲವು ಸಣ್ಣ ಅಪಘಾತಗಳನ್ನು ನಾವು ಪರಿಶೀಲಿಸಿದಾಗ, ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರುವುದಲ್ಲ. ಹಾಗಾಗಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಜೀವ ಹೋಗಿರುತ್ತದೆ. ನಾವು ತಂತ್ರಜ್ಞಾನ ಬೆಳೆದಂತೆಲ್ಲ, ಆಧುನೀಕತೆ ಬೆಳೆದಂತೆಲ್ಲ, ಬೇಸಿಕೆ ಮರೆಯುತ್ತಿದ್ದೇವೆ. ಮೊದಲು ನಮ್ಮ ಜೀವದ ಸುರಕ್ಷತೆ ಕಡೆಗೆ ಸಾಗೋಣ. ಹೆಲ್ಮೆಟ್‌ ನಮ್ಮ ಬದುಕಿನ ಭಾಗವಾಗಬೇಕು ಎಂದರು.

ಡಿವೈಎಸ್ಪಿ ಡಾ. ಮಂಜುನಾಥ ತಳವಾರ, ಸಿಪಿಐಗಳಾದ ಹುಲುಗಪ್ಪ, ಗುರುರಾಜ್‌ ಕಟ್ಟಿಮನಿ, ಲಖನ್‌ ಆರ್‌. ಮಸಗುಪ್ಪಿ, ಸೋಮ್ಲಾ ನಾಯ್ಕ, ರಾಜೇಶ್‌ ಭಟಗುರ್ಕಿ, ಗೌಸ್‌, ಪಿಎಸ್‌ಐಗಳಾದ

ಕೋದಂಡಪಾಣಿ, ಶಿವಕುಮಾರ ನಾಯ್ಕ, ಸಂತೋಷ್‌ ಡಪ್ಪಿನ್‌ ಮತ್ತಿತರರಿದ್ದರು.