ಸಾರಾಂಶ
ಗೋಕರ್ಣ: ಇದು ಕಲಿಯುಗ. ಕಲಿ ಎನ್ನುವುದಕ್ಕೆ ಸಂಕರ, ಕಲಸುವುದು ಎಂಬ ಅರ್ಥವಿದೆ. ಸಹಜ ಶುದ್ಧವಾದ ಗೋವಿನಿಂದ ಹಿಡಿದು ನಮ್ಮ ಮನೆಮಾತಿನ ವರೆಗೆ ಎಲ್ಲವೂ ಸಂಕರಗೊಂಡು ಕಲುಷಿತಗೊಂಡಿದೆ. ಈಗಲಾದರೂ ಎಚ್ಚೆತ್ತುಕೊಂಡು ಭಾಷೆ ಶುದ್ಧಗೊಳಿಸಲು ಮುಂದಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೫೨ನೇ ದಿನವಾದ ಶುಕ್ರವಾರ ಮೈಸೂರು, ದಾವಣಗೆರೆ- ಹರಿಹರ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.ನಮ್ಮ ನಮ್ಮ ಭಾಷೆ ಶುದ್ಧ ಮಾಡಿಕೊಳ್ಳೋಣ. ನಿಮ್ಮವರೆಗೆ ಬಂದಿರುವ ಶುದ್ಧಧಾರೆಯನ್ನು ಸಂಕರಗೊಳಿಸಿ ಕಲುಷಿತಗೊಳಿಸಬೇಡಿ. ಭಾಷೆ ಸಂಕರಗೊಳಿಸುವುದು ಸರಸ್ವತಿಗೆ ಮಾಡುವ ಅಪಚಾರ. ಶಂಕರನ ಕಾಲದ ಬದಲು ಸಂಕರದ ಕೈ ಮೇಲಾಗಿದೆ. ಭಾಷೆ ಶುದ್ಧವಾಗಿ ಮಾತನಾಡಿದರೆ ಸರಸ್ವತಿ ಒಲಿಯುತ್ತಾಳೆ ಎಂದರು.
ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಪರಿಕಲ್ಪನೆಗಳಿಗೆ ಕೂಡಾ ರಷ್ಯಾದಂಥ ದೇಶಗಳು ತಮ್ಮ ಭಾಷೆಯನ್ನೇ ಬಳಸುತ್ತವೆ. ಆದರೆ ನಾವು ಮಾತ್ರ ಸ್ವಾಭಿಮಾನ ಬಿಟ್ಟು, ಪರಕೀಯ ಭಾಷೆಗಳ ದಾಸರಾಗಿದ್ದೇವೆ. ನಾವು ಈ ಹಂತದಲ್ಲಾದರೂ ಜಾಗ್ರತರಾಗದಿದ್ದರೆ ಭಾಷೆಯೇ ನಶಿಸುವ ಅಪಾಯವಿದೆ. ಏನೇ ಹೊಸ ಅನ್ವೇಷಣೆಗಳು ಬಂದರೂ ನಮ್ಮದೇ ಪದ ಕಂಡುಕೊಳ್ಳೋಣ ಎಂದು ಸಲಹೆ ಮಾಡಿದರು.ದಿನಕ್ಕೊಂದು ಆಂಗ್ಲಪದ ಬಿಡುವ ಅಭಿಯಾನದಲ್ಲಿ ಎಐ ಪದ ಕೈಬಿಡುವಂತೆ ಸೂಚಿಸಿದರು. ಎಐ ತಂತ್ರಜ್ಞಾನ ಇಂದು ನಮ್ಮ ಬದುಕನ್ನು ವ್ಯಾಪಿಸಿದೆ. ಇದು ಮುಂದೆ ನಮ್ಮ ಅಸ್ತಿತ್ವಕ್ಕೇ ಧಕ್ಕೆ ತರುವ ಅಪಾಯವೂ ಇದೆ. ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದವರೇ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಐ ಎನ್ನುವ ಪದ ಎರಡು ಸ್ವರಾಕ್ಷರಗಳನ್ನು ಒಳಗೊಂಡಿದ್ದು ಉಚ್ಚರಣೆಗೆ ಸುಲಭವಲ್ಲ; ಇದನ್ನು ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಅಥವಾ ಕೃತ್ರಿಮ ಬುದ್ಧಿಮತ್ತೆ ಎಂದು ಕರೆಯಬಹುದು. ಸಹಜವಲ್ಲದ್ದು ಎಂಬ ಅರ್ಥದಲ್ಲಿ ಇದು ಬಳಕೆಯಾಗುತ್ತದೆ ಎಂದರು.
ಚಾತುರ್ಮಾಸ್ಯ ಎನ್ನುವುದು ಗುರುಗಳ ೬೦ ದಿನಗಳ ದೊಡ್ಡ ಹಬ್ಬ. ಶಿಷ್ಯರಿಗೆ ಹಲವು ಹಬ್ಬಗಳಿದ್ದರೆ, ಗುರುಗಳಿಗೆ ಒಂದೇ ಹಬ್ಬ. ಈ ಹಬ್ಬಕ್ಕೆ ಆಗಮಿಸಿದ ಶಿಷ್ಯರೆಲ್ಲರೂ ಗುರುಕಾರುಣ್ಯದ ಆಶೀರ್ವಾದದಲ್ಲಿ ಮಿಂದೆದ್ದು, ಬದಲಾದ ಮನಸ್ಸು, ವ್ಯಕ್ತಿತ್ವದೊಂದಿಗೆ ಮರಳುವಂತಾಗಲಿ ಎಂದು ಆಶೀರ್ವದಿಸಿದರು.ಚಾತುರ್ಮಾಸ್ಯವೆಂಬ ಹಬ್ಬದಲ್ಲಿ ಗಣಪತಿಯ ಹಬ್ಬವೂ ಸೇರಿದೆ. ಜೀವನ ಮುನ್ನಡೆಯಬೇಕಾದರೆ ಗುರು- ಗಣಪತಿ ಇಬ್ಬರೂ ಬೇಕು. ಗುರು ದಾರಿ ತೋರಿದರೆ, ವಿಘ್ನಗಳನ್ನು ದೂರಮಾಡುವವನು ಗಣಪತಿ. ಗುರು ಗಣಪತಿಯ ರಕ್ಷೆ ಇದ್ದರೆ ಅಂಥವರು ಜೀವನದಲ್ಲಿ ಹಿಂದಿರುಗಿ ನೋಡುವ ಪ್ರಮೇಯವಿಲ್ಲ. ಯೋಗ- ಭೋಗ ಎರಡರ ಪ್ರವೇಶವೂ ಮೂಲಾಧಾರ ಚಕ್ರದ ಮೂಲಕವೇ. ಮೂಲಾಧಾರ ಚಕ್ರದಲ್ಲಿ ಸದಾ ನೆಲೆಸಿ, ಗುರುಪೀಠದಲ್ಲಿ ವಿರಾಜಮಾನವಾಗಿರುವ ಗಣಪತಿ ಗುರುವಾಗಿ ಹರಸಲಿ ಎಂದು ಆಶಿಸಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ, ಕೇರಳದ ವೇದಮೂರ್ತಿ ರವೀಶ್ ತಂತ್ರಿ, ಮಂಗಳೂರಿನ ಉದ್ಯಮಿ ರಾಮ ಭಟ್ ನೆಡ್ಲೆ, ಕುಮಟಾ ಹೊನ್ನಾವರ ವಲಯ ಅರಣ್ಯಾಧಿಕಾರಿ ಯೋಗೀಶ್ ಅವರು ಶ್ರೀಗಳ ದರ್ಶನಾಶೀರ್ವಾದ ಪಡೆದರು. ಶ್ರೀಮಠದ ಸಿಒಒ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜಿ.ಎಲ್., ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮೈಸೂರು ವಲಯ ಅಧ್ಯಕ್ಷ ಮೋಹನ್ ಮಂಕಾಳೆ, ವಿವಿವಿ ಆಡಳಿತಾಧಿಕಾರಿ ಟಿ.ಜಿ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಚಾತುರ್ಮಾಸ್ಯ ತಂಡದ ಶ್ರೀಕಾಂತ ಹೆಗಡೆ, ಜಿ.ವಿ. ಹೆಗಡೆ, ವಿಷ್ಣು ಬನಾರಿ, ಎಂ.ಎನ್. ಮಹೇಶ ಭಟ್ಟ, ಎನ್.ಆರ್. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.