ಸಾರಾಂಶ
ಧಾರವಾಡ:
ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಲು ಐಐಟಿ ಅಂತಹ ತಾಂತ್ರಿಕ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಲ್ಲಿರಬೇಕು ಎಂದು ಸ್ವರ್ಣಾ ಸಮೂಹ ಸಂಸ್ಥೆ ಮುಖ್ಯಸ್ಥ ಡಾ. ವಿಎಸ್‌ವಿ ಪ್ರಸಾದ ಹೇಳಿದರು.ಇಲ್ಲಿಯ ಐಐಟಿ ಧಾರವಾಡದ ಸೆಂಟ್ರಲ್ ಲರ್ನಿಂಗ್ ಥಿಯೇಟರ್‌ನಲ್ಲಿ ಶುಕ್ರವಾರ ನಡೆದ ತಾಂತ್ರಿಕ ಉತ್ಸವಕ್ಕೆ ಚಾಲನೆ ನೀಡಿದ ಅವರು, ಐಐಟಿ ವಿದ್ಯಾರ್ಥಿಗಳ ಮೇಲೆ ತುಂಬ ಜವಾಬ್ದಾರಿ ಇದೆ. ರಾಷ್ಟ್ರೀಯ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುವ ಕಾರ್ಯಗಳನ್ನು ತಾವುಗಳು ಮಾಡಬೇಕು. ಭಾರತದ ಪ್ರಗತಿಯನ್ನು ಚಾಲನೆ ಮಾಡುವಲ್ಲಿ ನಾವೀನ್ಯತೆ, ಸಮರ್ಪಣೆ ಮತ್ತು ಮುಂದಾಲೋಚನೆಯ ವಿಧಾನದ ಮಹತ್ವವನ್ನು ಮತ್ತು ದೇಶವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಇಂತಹ ಉತ್ಸವಗಳು ಸಹಕಾರಿಯಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಐಟಿ ನಿರ್ದೇಶಕ ಪ್ರೊ. ವಿ.ಆರ್. ದೇಸಾಯಿ, ಈ ಉತ್ಸವವು ದೇಶಾದ್ಯಂತ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮ ವೃತ್ತಿಪರರನ್ನು ಆಕರ್ಷಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದ ಸ್ಪರ್ಧೆ, ಕಾರ್ಯಾಗಾರ ಮತ್ತು ಮುಖ್ಯ ಭಾಷಣಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಉತ್ಸವದಲ್ಲಿ ಒಳಗೊಂಡಿದೆ. ಈ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಅವರ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.ರೊಬೊಟಿಕ್ಸ್ ಮತ್ತು ಎಐ, ಯಂತ್ರ ಕಲಿಕೆ ಮತ್ತು ಬಾಹ್ಯಾಕಾಶ ಡೇಟಾ ವಿಜ್ಞಾನ, ತ್ರಿಡಿ ಮಾಡೆಲಿಂಗ್ ಮತ್ತು ಸುಸ್ಥಿರ ನಾವೀನ್ಯತೆ, ಬ್ಲಾಕ್‌ಚೈನ್ ಮತ್ತು ಸೈಬರ್‌ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ವರ್ಧಿತ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ಬಗ್ಗೆ ಈ ಉತ್ಸವ ಹೆಚ್ಚು ಕೇಂದ್ರೀಕರಿಸಿದ ಎಂಬ ಮಾಹಿತಿ ನೀಡಿದರು.
ಐಐಟಿ ಡೀನ್ ಪ್ರೊ. ನಾರಾಯಣ ಪುಣೇಕರ್ ಮಾತನಾಡಿ, ಇಂತಹ ತಾಂತ್ರಿಕ ಉತ್ಸವಗಳು ವಿದ್ಯಾರ್ಥಿಯ ನಾವೀನ್ಯತೆ, ಸೃಜನಶೀಲತೆ ಉತ್ತೇಜಿಸುತ್ತವೆ. ಸಮಗ್ರ ಶಿಕ್ಷಣ ಮತ್ತು ತಾಂತ್ರಿಕ ಶ್ರೇಷ್ಠತೆಗೆ ಐಐಟಿ ಧಾರವಾಡದ ಬದ್ಧತೆ ಹೊಂದಿದೆ ಎಂದರು.ಐಐಟಿ ವಿವಿಧ ಡೀನ್‌ಗಳಾದ ಪ್ರೊ. ಅಮರನಾಥ ಹೆಗ್ಡೆ, ಪ್ರೊ. ಧೀರಜ್ ಪಾಟೀಲ್, ಪ್ರೊ.ಸೂರ್ಯ ಪ್ರತಾಪ್ ಸಿಂಗ್, ಪ್ರೊ. ರಾಜೇಶ್ವರ ರಾವ್ ಇದ್ದರು.