ಸಾರಾಂಶ
ಹಗರಿಬೊಮ್ಮನಹಳ್ಳಿ: ಒಳಮೀಸಲಾತಿ ಕುರಿತಂತೆ ಸರ್ಕಾರಕ್ಕಿರುವ ಆತಂಕಗಳನ್ನು ನ್ಯಾಯಾಲಯ ದೂರ ಮಾಡಿದೆ. ಈ ಹಿನ್ನೆಲೆಯಲ್ಲಿ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ವರದಿ ಜಾರಿಗೊಳಿಸಲು ಸಚಿವರಾದ ಆರ್.ಬಿ.ತಿಮ್ಮಾಪುರ, ಮುನಿಯಪ್ಪ ಹಾಗೂ ಎಚ್.ಆಂಜನೇಯ ಸಿಎಂ ಮೇಲೆ ಒತ್ತಡ ಹಾಕಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ತಿಳಿಸಿದರು.
ಬಿಜೆಪಿ ಎಸ್ಸಿ ಮೋರ್ಚಾದಿಂದ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವುದು ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಿದಂತಾಗಿದೆ. ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ೨೦೧೬ರಲ್ಲಿ ೬ಲಕ್ಷಕ್ಕೂ ಹೆಚ್ಚು ಜನರು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ್ದರೂ ಅಂದಿನ ಸಿಎಂ ಸಿದ್ಧರಾಮಯ್ಯ ಹೋರಾಟದ ಸ್ಥಳಕ್ಕೆ ಭೇಟಿ ನೀಡಲಿಲ್ಲ. ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ನೀಡಿದ ಭರವಸೆಯನ್ನೂ ಕಾಂಗ್ರೆಸ್ ಮರೆತಿದೆ. ವರದಿ ಜಾರಿಗೆ ಕೇವಲ ನೆಪ ಹೇಳುತ್ತಲೆ ತಳ್ಳಹಾಕಿದೆ. ಆದರೆ, ಬೊಮ್ಮಯಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವ ಬದ್ಧತೆ ತೋರಿತ್ತು. ಇದೀಗ ಕೇಂದ್ರ ಸರಕಾರ ಪೂರಕ ಅಂಕಿಅಂಶಗಳೊಂದಿಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಮೂಲಕ ವರದಿ ಜಾರಿಗೆ ಒತ್ತಾಸೆಯಾಗಿದೆ ಎಂದು ತಿಳಿಸಿದರು.
ಬಿಜೆಪಿ ಎಸ್ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಎಚ್.ಮರಿಯಪ್ಪ ಮಾತನಾಡಿದರು.ಬಿಜೆಪಿ ಮಂಡಲ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಎಸ್ಸಿ ಮೋರ್ಚಾದ ಎ.ಕೆ. ರಾಮಣ್ಣ, ಟಿ.ಅರ್ಜುನ್, ಕೋಗಳಿ ಪ್ರಕಾಶ್, ವಿರೂಪಾಕ್ಷ, ಗಾಳೆಪ್ಪ, ಮಂಜುನಾಥ, ನಾಗಪ್ಪ, ಸುಬ್ರಮಣ್ಯ, ಆನಂದಪ್ಪ, ಮಾದುರು ಮಹೇಶ, ಉಪಾರಗಟ್ಟಿ ಬುಳ್ಳಪ್ಪ, ನಿಂಗರಾಜ, ಭೀಮಪ್ಪ, ಪ್ರತಾಪ್, ದುರುಗಪ್ಪ ಇದ್ದರು.