ಮಹನೀಯರ ಆದರ್ಶ, ಮೌಲ್ಯಗಳ ಅರಿವು ಮೂಡಿಸುವ ಕಾರ್ಯವಾಗಲಿ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಹನೀಯರ ಆದರ್ಶ ಹಾಗೂ ಮೌಲ್ಯಗಳ ಅರಿವನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮೂಡಿಸಿದಾಗ ಅವರು ದೇಶದ ಸತ್ಪ್ರಜೆ ಆಗಲು ಸಾಧ್ಯ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಹೇಳಿದರು.

ತಾಲೂಕು ಆಡಳಿತ, ವಿವಿಧ ಇಲಾಖೆಗಳು ಹಾಗೂ ಉಪ್ಪಾರ ಸಮಾಜದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹನೀಯರು ಸರ್ವಕಾಲಕ್ಕೂ ಮಾದರಿಯಾಗಿದ್ದಾರೆ. ತಮ್ಮ ಕಷ್ಟಗಳನ್ನು ಬದಿಗೊತ್ತಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂತಹವರನ್ನು ಒಂದು ಸಮಾಜಕ್ಕೆ ಮೀಸಲಿಡುವ ಸಂಕುಚಿತ ಮನೋಭಾವ ಬಿಟ್ಟು ಎಲ್ಲಾ ಸಮಾಜದವರು ಒಂದಾಗಿ ಜಯಂತಿ ಆಚರಿಸುವ ಕಾರ್ಯವಾಗಬೇಕು ಎಂದರು. ಸಮುದಾಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳು ಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಒದಗಿಸುವುದು ಕಡಿಮೆಯಾಗಿದೆ. ಆದಾಯಕ್ಕಿಂತ ಅಧಿಕ ಹಣವನ್ನು ಖಾಸಗಿ ಶಾಲೆಯಲ್ಲಿ ಶಿಕ್ಷಣಕ್ಕೆ ನೀಡಿದ್ದೇವೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಸರ್ಕಾರದಿಂದ ಇದ್ದರೂ ಪಾಲನೆ ಆಗುತ್ತಿಲ್ಲ. ಸಾರ್ವಜನಿಕ ಆಸ್ಪತ್ರೆ ಸೌಲಭ್ಯವಿದ್ದರೂ ಖಾಸಗಿ ಆಸ್ಪತ್ರೆಗೆ ತೆರಳಿ ಹಣ ವ್ಯಯಿಸಿಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕಾರ್ಯವಾಗಬೇಕು ಎಂದರು.

ತಾಲೂಕು ಅಧ್ಯಕ್ಷ ಪಿ‌.ಕೆ.ಪರಪ್ಪ ಮಾತನಾಡಿ, ಸರ್ಕಾರ ತಿಥಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ಇಂದು ಭಗೀರಥ ಜಯಂತಿಯನ್ನು ಆಚರಿಸಲು ಕರೆ ನೀಡಿದ್ದು, ಅದರಂತೆ ಎಲ್ಲಾ ಇಲಾಖೆಗಳಲ್ಲಿ ಭಗೀರಥ ಜಯಂತಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಭಗೀರಥ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಶಿಕ್ಷಣದಿಂದ ಸಮಾಜ ಮುಂದುವರಿಯಲು ಸಾಧ್ಯ. ಸಮಾಜದವರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಈ ವೇಳೆ ಭಗೀರಥ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಭಗೀರಥ ಮಹಿಳಾ ಸಂಘದ ಅಧ್ಯಕ್ಷೆ ಭಾಗೀರಥಮ್ಮ, ಮುಖಂಡರಾದ ಕಾರೇಹಳ್ಳಿ ಬಸವರಾಜ್, ಕೊಂಡಾಪುರ ಮಂಜುನಾಥ್, ವಿಶಾಲಾಕ್ಷಿ ನಟರಾಜ್, ರವಿಕುಮಾರ್, ದೀಪಿಕಾ ಸತೀಶ್, ಆಗ್ರೋ ಶಿವಣ್ಣ, ಮಾವಿನಕಟ್ಟೆ ಗುರುಸ್ವಾಮಿ ಸೇರಿದಂತೆ ಉಪ್ಪಾರ ಸಂಘದ ನಿರ್ದೇಶಕರುಗಳು, ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು.