ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಯಾವುದೇ ಸ್ಪರ್ಧೆಯಲ್ಲಿ ಸೋಲು- ಗೆಲುವಿಗೆ ಪ್ರಾಮುಖ್ಯತೆ ಕೊಡದೇ ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡುವುದು ಮುಖ್ಯವಾಗಿದೆ. ಪ್ರತಿಭಾವಂತರಿಗೆ ಖಂಡಿತ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಸೋಮವಾರ ನಡೆದ ಬಸವನಬಾಗೇವಾಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ, ಶ್ರೀಮಂತ- ಬಡವ ಕಂದಕ ಸೃಷ್ಟಿಯಾಗಿದೆ. ಪ್ರತಿಭಾವಂತರಿಗೆ ಈ ಕಂದಕ ಅನ್ವಯಿಸಲ್ಲ. ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯುವಂತಾಗಬೇಕು. ಮಕ್ಕಳಲ್ಲಿ ಅನೇಕ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸಿ ಅನಾವರಣ ಗೊಳಿಸುವ ಅವಕಾಶ ನೀಡುವಂತಾಗಬೇಕು. ಕಳೆದ 18 ವರ್ಷಗಳಿಂದ ಪ್ರತಿಭಾ ಕಾರಂಜಿ ಮಕ್ಕಳಿಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಪ್ರತಿಭೆ ಯಾರ ಮನೆಯ ಸ್ವತ್ತಲ್ಲ, ಅದಕ್ಕೆ ಗಂಡು-ಹೆಣ್ಣೆಂಬ ಬೇಧವಿಲ್ಲ. ಬಸವಾದಿ ಶರಣರು ಸಮಾಜವನ್ನು ಕಟ್ಟಿದ ರೀತಿಯೂ ಕೂಡ ವೃತ್ತಿ ಕೌಶಲ್ಯದ ಪ್ರತಿಭೆಗಳ ಇದೇ ಮಾದರಿಯದ್ದಾಗಿತ್ತು. ಬಸವಣ್ಣನವರು ಗಂಡು- ಹೆಣ್ಣಿನ ಮಧ್ಯೆ ಯಾವ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮಹಿಳೆಯರು ಎಲ್ಲ ರಂಗದಲ್ಲೂ ಪುರುಷರಿಗೆ ಸಮನಾಗಿ ಪೈಪೋಟಿ ನೀಡುತ್ತಿದ್ದಾರೆ. ಭಾರತ ದೇಶದಲ್ಲಿ ಓರ್ವ ಮಹಿಳೆ ಈ ದೇಶದ ರಾಷ್ಟ್ರಪತಿ, ಪ್ರಧಾನಿ ಆಗುವ ಅವಕಾಶ ಪಡೆಯುತ್ತಾರೆ ಎಂದರೆ ಇದು ಪ್ರತಿಭೆಯ ಸಾಮರ್ಥ್ಯ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರದ ಸೊಗಸು ಎಂದರು.
ಆಧುನಿಕತೆಯ ವೈಜ್ಞಾನಿಕ ತಾಂತ್ರಿಕ ಯುಗದಲ್ಲೂ ಇಂದಿಗೂ ಹಲವು ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶವಿಲ್ಲ. ಆದರೆ ಮುಕ್ತ ಹಾಗೂ ಸಮಾನ ಅವಕಾಶ ಪಡೆದ ದೇಶಗಳ ಮಹಿಳೆಯರು ತಮ್ಮಲ್ಲಿರುವ ಪ್ರತಿಭಾವಂತಿಕೆ ಮೂಲಕವೇ ವಿಶ್ವದ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಪ್ರಾಸ್ತಾವಿಕ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಸಾಕಷ್ಟು ಪ್ರತಿಭೆಗಳು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೊರಹೊಮ್ಮುತ್ತಿವೆ. ಪ್ರತಿಭಾ ಕಾರಂಜಿ ಎನ್ನುವುದು ಮಕ್ಕಳ ಕಲಿಕೆಯೊಂದಿಗೆ ಮಕ್ಕಳಲ್ಲಿರುವ ಪ್ರತಿಭೆ ಪ್ರಸ್ತುತ ಪಡಿಸಲು ಒಂದು ವೇದಿಕೆಯಾಗಿದೆ. ಪ್ರತಿ ಶಾಲೆ ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ತಾಲೂಕಿಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ನಿರ್ಣಾಯಕರು ಪ್ರಾಮಾಣಿಕವಾಗಿ ನಿರ್ಣಯ ನೀಡುವ ಮೂಲಕ ಸೂಕ್ತ ಪ್ರತಿಭೆಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಳಿಸಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವ್ಹಿ.ಎಸ್.ಕಲಾದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಸವೇಶ್ವರ ಕರ್ನಾಟಕ ಪಬ್ಲಿಕ್ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೊಳಸಂಗಿ, ಕೆಪಿಸಿಸಿ ರಾಜ್ಯ ಸಂಯೋಜಕ ಸಂಗಮೇಶ ಓಲೇಕಾರ, ಹಿರಿಯ ನ್ಯಾಯವಾದಿ ಬಿ,ಕೆ.ಕಲ್ಲೂರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಮಹಿಬೂ ನಾಯ್ಕೋಡಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಎಚ್.ಬಿ.ಬಾರಿಕಾಯಿ, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದು ಉಕ್ಕಲಿ, ಶಿಕ್ಷಕರ ಸಂಘದ ಪ್ರಮುಖರಾದ ಅಶೋಕ ಗಿಡ್ಡಪ್ಪಗೋಳ, ರಮೇಶ ಪೂಜಾರಿ,ಹೊನ್ನಪ್ಪ ಗೊಳಸಂಗಿ, ಬಸವರಾಜ ಪೂಜಾರಿ,ಎ,ಎಲ್.ಗಂಗೂರ, ಸಂಗಮೇಶ ಪೂಜಾರಿ, ಶ್ರೀನಾಥ ದೊಡಮನಿ, ಸುರೇಶ ಬಿರಾದಾರ,ಆರ್.ಡಿ.ಪವಾರ ಸೇರಿದಂತೆ ಇತರರು ವೇದಿಕೆ ಇದ್ದರು.ಕ್ಷೇತ್ರಸಮನ್ವಯಾಧಿಕಾರಿ ಸುನೀಲ ನಾಯಕ ಸ್ವಾಗತಿಸಿದರು. ಎಸ್.ಎಸ್.ಅಂಬಲಿ ನಿರೂಪಿಸಿದರು.ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ವಂದಿಸಿದರು. ನಂತರ ಅಖಂಡ ಬಸವನಬಾಗೇವಾಡಿ ತಾಲೂಕಿನಿಂದ ಆಗಮಿಸಿದ್ದ ಪ್ರಾಥಮಿಕ,ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))