ಗೊತ್ತುವಳಿ ಮಂಡನೆಗಿಂತ ಜಾರಿಗೆ ತರುವ ಕೆಲಸವಾಗಲಿ

| Published : Feb 05 2025, 12:31 AM IST

ಸಾರಾಂಶ

ಪ್ರಸ್ತುತ ಗ್ರಂಥ ಪ್ರಕಟಣೆಯು ದೊಡ್ಡ ಉದ್ಯಮವಾಗಿ ಹೊರಹೊಮ್ಮಿದ್ದು, ಪುಸ್ತಕಗಳ ಸಂಖ್ಯೆ ಬೆಳೆಸಿಕೊಂಡು ಸಾಹಿತಿಯಾಗಲು ಲೇಖಕರು ಹೋಗಬಾರದು. ತಮ್ಮ ಬರವಣೆಗೆಯಲ್ಲಿ ಸತ್ವ ಇರಬೇಕು.

ಧಾರವಾಡ:

ಅಖಿಲ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಬರೀ ಗೊತ್ತುವಳಿ, ನಿರ್ಣಯಗಳನ್ನು ಮಂಡಿಸುವುದೇ ಸಾಧನೆ ಅಲ್ಲ, ಅವುಗಳನ್ನು ಮುಂದಿನ ಸಮ್ಮೇಳನದ ಒಳಗಾಗಿ ಜಾರಿಗೆ ತರುವ ಕೆಲಸವಾಗಬೇಕು ಎಂದು ಕಸಾಪ ಅಧ್ಯಕ್ಷರಿಗೆ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್‌ ಅಧ್ಯಕ್ಷ, ಸಾಹಿತಿ ಡಾ.ವೀರಣ್ಣ ರಾಜೂರ ಸಲಹೆ ನೀಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ ಹಾಗೂ ಭಾಷೆಯ ವಿಷಯದಲ್ಲಿ ಆಡಳಿತ ಸರ್ಕಾರಗಳ ಇಚ್ಚಾಶಕ್ತಿ ಹಾಗೂ ಕನ್ನಡಿಗರ ಸ್ವಾಭಿಮಾನದ ಕೊರತೆಯಿಂದ ಕನ್ನಡ ಸಾರ್ವಭೌಮತ್ವ ಪಡೆದುಕೊಂಡಿಲ್ಲ ಎಂಬ ಬೇಸರವನ್ನು ವ್ಯಕ್ತವ್ಯಕ್ತಪಡಿಸಿದರು.

ಉದ್ಯಮವಾದ ಗ್ರಂಥ ಪ್ರಕಟಣೆ:

ಪ್ರಸ್ತುತ ಗ್ರಂಥ ಪ್ರಕಟಣೆಯು ದೊಡ್ಡ ಉದ್ಯಮವಾಗಿ ಹೊರಹೊಮ್ಮಿದ್ದು, ಪುಸ್ತಕಗಳ ಸಂಖ್ಯೆ ಬೆಳೆಸಿಕೊಂಡು ಸಾಹಿತಿಯಾಗಲು ಲೇಖಕರು ಹೋಗಬಾರದು. ತಮ್ಮ ಬರವಣೆಗೆಯಲ್ಲಿ ಸತ್ವ ಇರಲಿ ಎಂಬ ಸಂದೇಶ ನೀಡಿದ ಅವರು, ಲೇಖಕ, ಸಾಹಿತಿಯಲ್ಲಿ ಅಧ್ಯಯನಶೀಲತೆ, ಬದ್ಧತೆ ಇದ್ದಾಗ ಮಾತ್ರ ಆತನಿಂದ ಉತ್ತಮ ಪಠ್ಯ ಬರಲು ಸಾಧ್ಯವಾಗಲಿದೆ. ಇದಕ್ಕೆ ತಕ್ಕ ಉದಾಹರಣೆ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿ ನಡೆದ ಅವಾಂತರವೇ ಸಾಕ್ಷಿ. ವಿದ್ಯಾರ್ಥಿಗಳ ಸರ್ವಾಂಗೀಣ ಬದುಕಿಗಾಗಿ ಉತ್ತಮ ಪಠ್ಯಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಗಮನ ಹರಿಸಬೇಕಾಗಿದೆ ಎಂದರು.

ಗುಂಜಾಳಗೆ ರಾಷ್ಟ್ರೀಯ ಪ್ರಶಸ್ತಿ:

ಸದ್ಯದಲ್ಲಿಯೇ ಹಿರಿಯರಾದ ಎಸ್.ಆರ್. ಗುಂಜಾಳ ಅವರಿಗೆ ರಾಷ್ಟ್ರೀಯ ಮಟ್ಟದ, ಪ್ರತಿಷ್ಠಿತ ಪ್ರಶಸ್ತಿ ಲಭಿಸಲಿದೆ ಎಂದು ಭವಿಷ್ಯ ನುಡಿದ ರಾಜೂರ, ಆ ಪ್ರಶಸ್ತಿ ಯಾವುದು ಎನ್ನುವುದು ಈಗ ಹೇಳಲು ಸಾಧ್ಯವಿಲ್ಲ ಎಂದ ಅವರು, ವಚನ ಸಾಹಿತ್ಯಕ್ಕೆ ಎಸ್.ಆರ್. ಗುಂಜಾಳ ಕೊಡುಗೆ ಬಹಳ ಇದೆ. ವಚನಗಳ ಪದಪ್ರಯೋಗ ಕೋಶಕ್ಕೆ ನಾಂದಿ ಹಾಡಿದ್ದು ಅವರು. ಉತ್ತಂಗಿ ಚನ್ನಯ್ಯನವರ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿದ್ದು ಸ್ವಾಗತಾರ್ಹ ಎಂದರು.

ಪ್ರಾಚಾರ್ಯ ಶಶಿಧರ ತೋಡಕರ ಮಾತನಾಡಿ, ವಚನ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಗುಂಜಾಳ ಅವರು ನೀಡಿದ್ದಾರೆ ಎಂದರು. ಸಮ್ಮೇಳನಾಧ್ಯಕ್ಷ ಡಾ. ಎಸ್.ಆರ್. ಗುಂಜಾಳ ಅವರನ್ನು ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರಮ್ಮ ನ್ಯಾಮತಿ, ಕೆ.ಎಸ್. ಕೌಜಲಗಿ, ಶಂಕರ ಹಲಗತ್ತಿ, ಡಾ. ಶರಣಪ್ಪ ಕೊಟಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಎಸ್.ಎಚ್. ಪ್ರತಾಪ್, ಶಾಂತವೀರ ಬೆಟಗೇರಿ ನಿರ್ವಹಿಸಿದರು. ಡಾ. ಎಸ್.ಎಸ್. ದೊಡಮನಿ ನಿರೂಪಿಸಿದರು. ಇದಕ್ಕೂ ಮೊದಲು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೂರ ಮನಸ್ಸುಗಳಿಗೆ ಧಿಕ್ಕಾರ:

ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಿಡುಗಡೆ ಸಂದರ್ಭದಲ್ಲಿ ಅವರಿಗೆ ಹಾರ ಹಾಕಿ, ಕುಂಬಳಕಾಯಿ ಒಡೆದು, ಘೋಷಣೆಗಳನ್ನು ಕೂಗಿ, ಹುಲಿಗಳು ಬಂದವು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಇಂತಹ ವಿಕೃತ ಮನಸ್ಸುಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ಸಾರಸ್ವತಲೋಕ ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ. ವೀರಣ್ಣ ರಾಜೂರ ಹೇಳಿದರು.