ಕನ್ನಡ ಕಲಿಸುವ, ಬೆಳೆಸುವ ಕೆಲಸ ಆಗಲಿ: ವೆಂಕಟೇಗೌಡ ಕರೆ

| Published : May 06 2024, 12:32 AM IST

ಸಾರಾಂಶ

ಕನ್ನಡಿಗರಾದ ನಾವು ಅನ್ಯ ಭಾಷಿಕರನ್ನು ಸೌಹಾರ್ಧಯುತವಾಗಿ ಕೈಬೀಸಿ ಕರೆದು ಸ್ವಾಗತಿಸಿ ಅವರ ಭಾಷೆಯನ್ನು ಅನುಕರಿಸುತ್ತಿದ್ದೇವೆ. ಆದರೆ, ಅವರಿಗೆ ಕನ್ನಡ ಕಲಿಸುವ ಕೆಲಸವನ್ನು ನಾವು ಮಾಡದಿರುವುದು ಬೇಸರ ತಂದಿದೆ. ಬೆಂಗಳೂರಿನಲ್ಲಿ ಶೇ.30 ರಿಂದ 40 ರಷ್ಟು ಮಾತ್ರ ಕನ್ನಡಿಗರು ವಾಸವಿದ್ದಾರೆ. ಇನ್ನುಳಿದ ಶೇ.60 ಮಂದಿ ಅನ್ಯಭಾಷಿಕರು ಬೆಂಗಳೂರನ್ನು ಅವರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಶೋಚನೀಯ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಕಳವಳಕಾರಿ ವಿಷಯ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ವೆಂಕಟೇಗೌಡ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ವರ್ಧಮಾನ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 110ನೇ ಸಂಸ್ಥಾಪನ ದಿನ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನಲ್ಲಿ ಶೇ.30 ರಿಂದ 40 ರಷ್ಟು ಮಾತ್ರ ಕನ್ನಡಿಗರು ವಾಸವಿದ್ದಾರೆ. ಇನ್ನುಳಿದ ಶೇ.60 ಮಂದಿ ಅನ್ಯಭಾಷಿಕರು ಬೆಂಗಳೂರನ್ನು ಅವರಿಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಿಗರಾದ ನಾವು ಅನ್ಯ ಭಾಷಿಕರನ್ನು ಸೌಹಾರ್ಧಯುತವಾಗಿ ಕೈಬೀಸಿ ಕರೆದು ಸ್ವಾಗತಿಸಿ ಅವರ ಭಾಷೆಯನ್ನು ಅನುಕರಿಸುತ್ತಿದ್ದೇವೆ. ಆದರೆ, ಅವರಿಗೆ ಕನ್ನಡ ಕಲಿಸುವ ಕೆಲಸವನ್ನು ನಾವು ಮಾಡದಿರುವುದು ಬೇಸರ ತಂದಿದೆ ಎಂದರು.

ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದ ವಿಷಯ. ನನ್ನ ಜನ್ಮ ಭೂಮಿ ಬೇರೆಯಾದರು ಕರ್ಮ ಭೂಮಿ ಮಂಡ್ಯವಾಗಿದೆ. ನನ್ನ 18 ವರ್ಷ ಸೇವೆಯಲ್ಲಿ 9 ವರ್ಷ ಮಂಡ್ಯ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ.ಉಮಾಶಂಕರ ಮಾತನಾಡಿ, ಕನ್ನಡ ಭಾಷೆ ಅಸ್ಮಿತೆ ಉಳಿಯಬೇಕಾದರೆ ಮೊದಲು ನಾವು ಕನ್ನಡ ಬಳಸುವ ಮತ್ತು ಬೆಳೆಸುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಲ್ಲಬೇಕು ಎಂದರು.

ನಾಡು, ನುಡಿ, ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ನಮಗೆ ನ್ಯಾಯ ಸಿಗಲು ಬೀದಿಗಿಳಿದು ಹೋರಾಟ ಮಾಡಲೇಬೇಕು. ಕನ್ನಡ ಭಾಷೆ ಶ್ರೀಮಂತ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬ ಕನ್ನಡಿಗನು ಪರಿಷತ್ತು ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಡವನಹಳ್ಳಿ ಸಿಎಂ ಕ್ರಾಂತಿ ಸಿಂಹ ಮಾತನಾಡಿ. ಕನ್ನಡ ಭಾಷೆ ಸಾರಸತ್ವ ಲೋಕಕ್ಕೆ ಹಲವು ಕವಿ ಮಾನ್ಯರು, ದಾಸರು, 12 ನೇ ಶತಮಾನದ ಬಸವಣ್ಣರ ಹಾದಿಯಾಗಿ ರಾಷ್ಟ್ರಕವಿ ಕುವೆಂಪುರವರ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡಿಗರಾದ ನಾವೇ ಕನ್ನಡವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಅಲ್ಪಸಂಖ್ಯಾ ಭಾಷೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದರು. ವಳಗೆರಹಳ್ಳಿ ಪ್ರಮೀಳ ವೀರಪ್ಪ ಪ್ರೌಢಶಾಲೆ ನಿವೃತ ದೈಹಿಕ ಶಿಕ್ಷಕ ದೇಶಹಳ್ಳಿ ಸಿದ್ದರಾಜು ಅವರನ್ನು ಅಭಿನಂದಿಸಲಾಯಿತು. ಕಲಾವಿದ ಮತ್ತು ಗಾಯಕ ಅಂಬರಹಳ್ಳಿ ಸ್ವಾಮಿ ಮತ್ತು ತಂಡದವರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

ವರ್ಧಮಾನ ಕಾಲೇಜಿನ ಕಾರ್ಯದರ್ಶಿ ಎಂ.ಎಚ್.ಅವಿನಾಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಟಿ.ಸಿ.ವಸಂತ, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಚಾಮನಹಳ್ಳಿ ಮಂಜು, ಜಿಲ್ಲಾ ಆರೋಗ್ಯ ನಿವೃತ್ತ ಶಿಕ್ಷಣಾಧಿಕಾರಿ ಶಿವಾನಂದ, ಮುಖಂಡರಾದ ಯರಗನಹಳ್ಳಿ ಮಹಾಲಿಂಗ, ಸೋಂಪುರ ಉಮೇಶ, ವಿ.ಎಚ್.ಶಿವಲಿಂಗಯ್ಯ, ಪಟೇಲ್ ಹರೀಶ, ವಿ.ಎಂ.ರಮೇಶ್, ಎಸ್.ಎಲ್.ಉಮೇಶ ಸೇರಿದಂತೆ ಇತರರಿದ್ದರು.