ಕನ್ನಡ ನಾಡು, ನುಡಿ, ಕಲೆ,ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಭವ ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ
ಕಾರಟಗಿ: ಕನ್ನಡಿಗರಿಗೆ ಕನ್ನಡವೇ ಕೂಡಲಸಂಗಮ ಎಂಬ ಸುಬುದ್ಧಿ ಎಲ್ಲರಲ್ಲೂ ಮೂಡಬೇಕಿದೆ. ಈ ಭಾಗದ ಇತಿಹಾಸ ಪರಂಪರೆ ಹಾಗೂ ಜನರ ಸಮಸ್ಯೆ ಮೇಲೆ ಬೆಳಕು ಚೆಲ್ಲುವಂತಾಗಲಿ ಹಾಗೆಯೇ ಬಡವರ ಶೋಷಿತರ ಬದುಕಿನ ಚಿತ್ರಣ ಬದಲಿಸುವ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಗಟ್ಟಿ ಸಾಹಿತ್ಯ ಈ ನೆಲದಿಂದ ಹೊರಹೊಮ್ಮಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಸೋಮವಾರ ರಾತ್ರಿ ಪಟ್ಟಣದಲ್ಲಿ ಕಾರಟಗಿ ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ಬಿ.ಚಿಲ್ಕರಾಗಿ ಇವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಸಮ್ಮೇಳನಕ್ಕೆ ಕಸಾಪದಿಂದ ಅಧಿಕೃತ ಆಹ್ವಾನ ನೀಡಿ ಗೌರವಿಸಿ ಮಾತನಾಡಿದರು.ಕನ್ನಡ ನಾಡು, ನುಡಿ, ಕಲೆ,ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಭವ ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ. ಫೆ. ೨೧ರಂದು ಸಮ್ಮೇಳನ ನಡೆಯಲಿದೆ. ತಾಲೂಕಿನ ಮರ್ಲಾನಹಳ್ಳಿ ಜನರು ಸಮ್ಮೇಳನದ ಯಶಸ್ವಿಗೆ ಟೊಂಕ ಕಟ್ಟ ನಿಂತಿದ್ದಾರೆ.ನಾವೇಲ್ಲರೂ ಸೇರಿ ಕನ್ನಡದ ತೇರು ಎಳೆಯೋಣ.
ಸಮಾಜದ ಓರೆ ಕೋರೆ ತಿದ್ದುವ ಸಮಾಜದ ಕೀಲು ಮುರಿಯುತ್ತಿರುವ ಮೌಢ್ಯ ಕಂದಾಚಾರಗಳಿಗೆ ಕೊಡಲಿ ಏಟು ನೀಡುವ ಸಾಹಿತ್ಯ ರಚನೆಯಾಗಬೇಕು. ಸಹಸ್ರಾರು ದಶಕಗಳ ಇತಿಹಾಸವುಳ್ಳ ಶ್ರೀಮಂತ ಭಾಷೆ.ಆದರೆ ಇಂಗ್ಲೀಷ್ ಭಾಷೆಯ ವ್ಯಾಮೋಹದ ಹಾವಳಿಗೆ ಕನ್ನಡ ನಲುಗುತ್ತಿದೆ.ಅದನ್ನು ಉಳಿಸಿ ಬೆಳೆಸಲು ಕನ್ನಡ ಭಾಷಾ ಸ್ವಾಭಿಮಾನ ಜಾಗೃತಗೊಳ್ಳಬೇಕಿದೆ ಎಂದರು.ಫೆ. ೨೧ರಂದು ಮರ್ಲಾನಹಳ್ಳಿಯ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಪ್ರೇಮಿಗಳಿಗೆ ಮನೆ ಮನೆಯ ಹಬ್ಬವಾಗಿ ಹೊರಹೊಮ್ಮಲಿದೆ. ಮರ್ಲಾನಹಳ್ಳಿ ಸೇರಿ ತಾಲೂಕಿನ ಇತಿಹಾಸ,ಕಲೆ,ಸಾಹಿತ್ಯ ಮತ್ತು ಪರಂಪರೆಯ ಕಾರ್ಯಕ್ಕೆ ಪ್ರತಿಯೊಬ್ಬರೂ ತಪ್ಪದೇ ಸಹಕಾರ ನೀಡಿ ಎಂದರು.
ಸನ್ಮಾನ ಹಾಗೂ ಅಧಿಕೃತ ಆಹ್ವಾನ ಸ್ವೀಕರಿಸಿದ ಸಮ್ಮೇಳನಾಧ್ಯಕ್ಷ ಡಾ. ಸಿ.ಬಿ.ಚಿಲ್ಕಾರಗಿ ಮಾತನಾಡಿ, ಇದು ನನ್ನ ಜೀವನದಲ್ಲಿ ಮರೆಯಲಾಗದಂತಹ ಅವಕಾಶ. ನಾಡಿನ ಭಾಷೆ, ಜನಪದ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನ ಜೀವಾಳವಾಗಿವೆ. ಮಾತೃಭಾಷೆ ಹಾಗೂ ತಾಯಿ ವಾತ್ಸಲ್ಯಕ್ಕೆ ಸರಿಸಾಟಿ ಯಾವುದು ಇಲ್ಲ. ಸಂಸ್ಕೃತಿ ಉಳಿಯಬೇಕಾದರೆ ಮಾತೃ ಭಾಷೆ ಉಳಿಯಬೇಕು. ಕಾರಟಗಿ ತಾಲೂಕಿನಲ್ಲಿಯೇ ಜನಿಸಿದ್ದು, ಐತಿಹಾಸಿಕ ಕನಕಗಿರಿ ಕ್ಷೇತ್ರದ ಎಲ್ಲದರ ಬಗ್ಗೆ ನನಗೆ ಮಾಹಿತಿ ಇದೆ. ಕನಕಗಿರಿ ಕ್ಷೇತ್ರದ ಕಾರಟಗಿ ಭಾಗ ನೀರಾವರಿ ಭಾಗ. ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ಶಾಸಕರಾದಾಗಿನಿಂದ ಕ್ಷೇತ್ರದ ಕನಕಗಿರಿ ಭಾಗದಲ್ಲಿ ಹಲವಾರು ಕೆರೆ, ಕಟ್ಟೆ ತುಂಬಿಸುವ ಮೂಲಕ ಜನತೆ ಅನುಭವಿಸುತ್ತಿದ್ದ ನೀರಿನ ಭವಣೆ ಸಂಪೂರ್ಣ ನಿವಾರಣೆಯಾಗಿದೆ ಎಂದರು.ನಂತರ ಸಚಿವರು ೩ನೇ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಪರಿಷತ್ ಪದಾಧಿಕಾರಿಗಳು ಹಾಗೂ ೩ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಬಿಡುಗಡೆಗೊಳಿಸಿದರು.
ಈ ವೇಳೆ ಪರಿಷತ್‌ನ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ನಾಗರಾಜ ಅರಳಿ, ಸದಸ್ಯ ಸೋಮನಾಥ ದೊಡ್ಡಮನಿ, ಶ್ರೀಕಾಂತ ಈಡಿಗೇರ, ಚಂದ್ರಶೇಖರ ಪಲ್ಲೇದ, ಕೆ.ಶ್ರೀಹರಿ, ಪ್ರಲ್ಹಾದ ಜೋಷಿ, ರಮೇಶ ಕುಲಕರ್ಣಿ,ಮಂಜುನಾಥ, ಬಸವರಾಜ ರ‍್ಯಾವಳದ, ಚನ್ನಬಸಪ್ಪ ವಕ್ಕಳದ, ವೀರುಪಾಕ್ಷಯ್ಯ ಸ್ವಾಮಿ ತಲೇಖಾನ, ಅಮರೇಶ ಪಾಟೀಲ್, ಬಸವರಾಜ ವಡಕ್ಕಣ್ಣನವರ, ಹನುಮಂತಪ್ಪ ತೊಂಡಿಹಾಳ, ವಿಠ್ಠಲ್ ಜೀರಗಾಳಿ, ಶಾಮಸುಂದರ್ ಇಂಜನಿ, ಹನಮೇಶ ಹುಳ್ಕಿಹಾಳ ಕ್ಯಾಂಪ್, ಜಂಬುನಾಥ ತುರಾಯದ, ಭೀಮಣ್ಣ ಕರಡಿ ಸೇರಿದಂತೆ ಇನ್ನಿತರರು ಇದ್ದರು.