ಮರಿಯಮ್ಮನಹಳ್ಳಿಯ ಜೋಡು ರಥೋತ್ಸವ ಮಾದರಿಯಾಗಲಿ

| Published : Apr 15 2024, 01:17 AM IST

ಸಾರಾಂಶ

ರಥೋತ್ಸವವನ್ನು ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ರಥೋತ್ಸವದ ವೇಳೆ ಯುವಕರು ನಟರ ಪೋಟೋಗಳನ್ನು, ಧ್ವಜಗಳನ್ನು ಹಿಡಿದು ಪ್ರದರ್ಶಿಸುವುದಾಗಲಿ.

ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಏ.17ರಂದು ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಜೋಡಿ ರಥೋತ್ಸವವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ ಹೇಳಿದರು.

ಅವರು ಪಟ್ಡಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ನಡೆದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡು ರಥೋತ್ಸವದ ಶಾಂತಿಸಭೆಯ ಅಧ್ಯಕ್ಷತೆವಹಿಸಿಕೊಂಡು ಅವರು ಮಾತನಾಡಿದರು, ರಥೋತ್ಸವವನ್ನು ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ರಥೋತ್ಸವದ ವೇಳೆ ಯುವಕರು ನಟರ ಪೋಟೋಗಳನ್ನು, ಧ್ವಜಗಳನ್ನು ಹಿಡಿದು ಪ್ರದರ್ಶಿಸುವುದಾಗಲಿ, ಮೆರವಣಿಗೆ ಮಾಡುವುದಾಗಲಿ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸಿದವರಿಗೆ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಅವರು ಹೇಳಿದರು.

ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ಆಯಾ ವಾರ್ಡುಗಳ ಮುಖಂಡರು ಅಲ್ಲಿನ ಯುವಕರನ್ನು ರಥೋತ್ಸವದ ವೇಳೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಮನವರಿಕೆ ಮಾಡಿಕೊಡಬೇಕು. ರಥೋತ್ಸವ ಮತ್ತು ಜಾತ್ರೆಯ ವೇಳೆ ಜನಸಂದಣಿಯಲ್ಲಿ ಯಾರೂ ಪೀಪಿಗಳನ್ನು ಊದಬಾರದು. ರಥದ ಗಾಲಿಗೆ ಸನ್ನೆ ಹಾಕುವವರು ಎದುರಾಳಿಗೆ ಉತ್ತೇಜಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಅವರು ಸೂಚಿಸಿದರು.

ಪಿಎಸ್ಐ ಮೌನೇಶ್ ರಾಥೋಡ್, ಉಪತಹಶಿಲ್ದಾರ ಎಚ್.ನಾಗರಾಜ್, ಪಪಂ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್, ಜೆಸ್ಕಾಂ ಎಂಜಿನಿಯರ್ ವಿಜಯಕುಮಾರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಚಿದ್ರಿ ಸತೀಶ್, ಸ್ಥಳೀಯ ಮುಖಂಡರಾದ ಎನ್.ಸತ್ಯನಾರಾಯಣ, ಎಲ್.ಪರಮೇಶ್ವರಪ್ಪ, ಎನ್.ಎಸ್. ಬುಡೇನ್ ಸಾಹೇಬ್‌, ಗೋವಿಂದರ ಪರುಶುರಾಮ, ಗರಗ ಪ್ರಕಾಶ್ ಪೂಜಾರ್‌, ತಳವಾರ ದೊಡ್ಡ ರಾಮಣ್ಣ, ಬಂಗಾರಿ ಮಂಜುನಾಥ, ಉರುವಕೊಂಡ ವೆಂಕಟೇಶ, ಕಲ್ಲಾಳ್ ಪರಶುರಾಮಪ್ಪ, ಎಂ.ಕೀರ್ತಿರಾಜ್ ಜೈನ್, ನವೀನಕುಮಾರ್, ಎಲೆಗಾರ ಮಂಜುನಾಥ, ರಹಿಮಾನ್ ಸೇರಿದಂತೆ ಪಪಂ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.