ಪತ್ರಕರ್ತರು ಸತ್ಯಾಸತ್ಯತೆ ಅರಿತು ವರದಿ ಮಾಡಲಿ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

| Published : Jul 07 2025, 12:17 AM IST

ಪತ್ರಕರ್ತರು ಸತ್ಯಾಸತ್ಯತೆ ಅರಿತು ವರದಿ ಮಾಡಲಿ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು; ಯಾವುದೇ ವಿಷಯದ ಕುರಿತು ವರದಿ ಮಾಡುವಾಗ ಅದರ ಸತ್ಯಾಸತ್ಯತೆ ತಿಳಿದು ವರದಿ ಮಾಡಬೇಕು.

ಹೊಸಪೇಟೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು; ಯಾವುದೇ ವಿಷಯದ ಕುರಿತು ವರದಿ ಮಾಡುವಾಗ ಅದರ ಸತ್ಯಾಸತ್ಯತೆ ತಿಳಿದು ವರದಿ ಮಾಡಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಭಾನುವಾರ ಆಶೀರ್ವಚನ ನೀಡಿದ ಅವರು, ಪತ್ರಕರ್ತರು ಕಂಡದ್ದೆಲ್ಲಾ ಸತ್ಯ ಆಗಿರುವುದಿಲ್ಲ. ಹಾಗಾಗಿ ವರದಿಗಾರಿಕೆ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲನೆ ನಡೆಸುವುದು ಸೂಕ್ತ ಎಂದರು.

ಸಮಾಜದಲ್ಲಿನ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಸಾಧ್ಯವಿಲ್ಲ. ಪತ್ರಕರ್ತರು ಸಮಾಜದಲ್ಲಿನ ಕತ್ತಲೆಯನ್ನು ಹೋಗಲಾಡಿಸಲು ಹಚ್ಚುವಂತಹ ದೀಪವಾಗಬೇಕು. ಪತ್ರಕರ್ತರಿಗೆ ಆತ್ಮವಿಶ್ವಾಸ ಇರಬೇಕು, ಆದರೆ ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ. ಒತ್ತಡದಲ್ಲಿರುವ ಮನುಷ್ಯನಿಗೆ ಸತ್ಯ ತಿಳಿಯುವುದಿಲ್ಲ. ಹಾಗಾಗಿ ಒತ್ತಡದಿಂದ ಮುಕ್ತರಾಗಿ ಕಾರ್ಯನಿರ್ವಹಿಸಬೇಕು. ಬಂಗಾರ ಹಾಗೂ ಕಬ್ಬಿಣವನ್ನುತಕ್ಕಡಿ ಒಂದೇ ರೀತಿಯಲ್ಲಿ ತೂಗುತ್ತದೆ. ಅದು ಯಾವುದೇ ಬೇಧಭಾವ ಮಾಡುವುದಿಲ್ಲ. ಪತ್ರಕರ್ತರು ಕೂಡ ಸಮಾಜದಲ್ಲಿ ಬೇಧ ಬಾವ ಮಾಡದೆ, ತಕ್ಕಡಿ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿ, ಇಂದಿನ ಯುಗದಲ್ಲಿ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರಾದವರು, ತಮ್ಮ ಇತಿಮಿತಿಯನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ರಾಜ್ಯ ಸರ್ಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆಗುತ್ತಿದ್ದು, ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಪತ್ರಕರ್ತರು ವರದಿ ಮಾಡುವಾಗ ಅವರಿಗೆ ಸತ್ಯ ಮುಖ್ಯವೋ ಅಥವಾ ಸಾರ್ವಜನಿಕ ಹಿತಾಸಕ್ತಿ ಮುಖ್ಯವೋ ಎಂಬುದನ್ನುಅರಿತು ವರದಿಗಾರಿಕೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ಕಾನೂನು ಸುವ್ಯವಸ್ಥೆಯಲ್ಲಿ ಪೊಲೀಸ್ ಹಾಗೂ ಪತ್ರಕರ್ತರ ನಡುವೆ ಪರಸ್ಪರ ಸಹಕಾರ ನಿರಂತರವಾಗಿರುತ್ತದೆ. ಪೊಲೀಸರು ಪತ್ಯಕ್ಷವಾಗಿ ಕಾರ್ಯನಿರ್ವಹಿಸಿದರೆ, ಪತ್ರಕರ್ತರು ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಪತ್ರಕರ್ತರ ದಿನಾಚರಣೆ ಆಂಗವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪತ್ರಕರ್ತರಾದ ಎಂ.ಜಿ. ಬಾಲಕೃಷ್ಣ, ಜೆ.ನಾಗರಾಜ, ಯು.ಎಂ. ಸುರೇಶ್, ವಿಶ್ವನಾಥ ಹಳ್ಳಿಗುಡಿ, ವಿರೇಶ್‌ ಅಂಗಡಿ, ರೇಖಾ ಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ದಿನಾಚರಣೆ ಅಂಗವಾಗಿ ಜರುಗಿದ ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಜಲಿ ಭರತವಾಟ್ಯ ಕಲಾ ತಂಡದ ಮಕ್ಕಳಿಂದ ಭರತನಾಟ್ಯ, ಪತ್ರಕರ್ತರ ಕುಟುಂಬದ ಸದಸ್ಯರಿಗೆ ವಿವಿಧ ಕ್ರೀಡೆಗಳು ಜರುಗಿದವು.

ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಭಾಗವಹಿಸಿದ್ದರು.