ತಾಲೂಕು ಮಟ್ಟದಲ್ಲಿಯೇ ಎಲ್ಲಾ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ನ್ಯಾಯಯುತ ಸೌಲಭ್ಯಗಳು ಎಲ್ಲರಿಗೂ ದೊರೆಯಬೇಕು. ನ್ಯಾಯಾಲಯದಲ್ಲಿ ಹಲವು ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಿರಿಯ ಸಿವಿಲ್ ನ್ಯಾಯಾಲಯ ಅತ್ಯಗತ್ಯ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹೇಳಿದರು.

ಮಡಿಕೇರಿ : ತಾಲೂಕು ಮಟ್ಟದಲ್ಲಿಯೇ ಎಲ್ಲಾ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ನ್ಯಾಯಯುತ ಸೌಲಭ್ಯಗಳು ಎಲ್ಲರಿಗೂ ದೊರೆಯಬೇಕು. ನ್ಯಾಯಾಲಯದಲ್ಲಿ ಹಲವು ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಿರಿಯ ಸಿವಿಲ್ ನ್ಯಾಯಾಲಯ ಅತ್ಯಗತ್ಯ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹೇಳಿದರು.ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಉದ್ಘಾಟಿಸಿದರು. ಹಾಗೆಯೇ ಇ-ಸೇವಾ ಕೇಂದ್ರಕ್ಕೂ ಚಾಲನೆ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಕಾನೂನು ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಹಿರಿಯ ಸಿವಿಲ್ ನ್ಯಾಯಾಲಯ ಉದ್ಘಾಟಿಸಲಾಗಿದೆ ಎಂದು ಹೇಳಿದರು.

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ರಾಷ್ಟ್ರದ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಮುಖವಾಗಿದ್ದು, ನ್ಯಾಯಾಂಗ ವ್ಯವಸ್ಥೆ ಬಲಯುತವಾಗಿದ್ದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯಲ್ಲಿ ಬಹು ವರ್ಷಗಳ ಕನಸು ನನಸಾಗಿದೆ. ಅನೇಕ ಹಿರಿಯ ಹೋರಾಟಗಾರರ ಫಲವಾಗಿ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಆರಂಭವಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ಬುಡಕಟ್ಟು ಜನರು ಆರೋಗ್ಯ ಕೇಂದ್ರಕ್ಕೆ ಹೋಗುವುದು ಕಡಿಮೆ. ಆದ್ದರಿಂದ ಸಂಚಾರಿ ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಅದೇ ರೀತಿ ನ್ಯಾಯಾಲಯ ಹತ್ತಿರ ಇದ್ದಲ್ಲಿ ಕಕ್ಷಿದಾರರು ತೆರಳಿ ನ್ಯಾಯ ಪಡೆಯುತ್ತಾರೆ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಎಂ.ಜಿ.ಶುಕುರೆ ಕಮಲ್ ಅವರು ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತವಾಗಿ ಜೀವನ ನಡೆಸಬೇಕು. ಯಾರಲ್ಲೂ ಸಹ ವ್ಯಾಜ್ಯಗಳು ಇರಬಾರದು. ಆ ನಿಟ್ಟಿನಲ್ಲಿ ಬದುಕು ನಡೆಸುವತ್ತ ಗಮನಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. ರಾಜ್ಯ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ನ್ಯಾಯಾಂಗ ಆಡಳಿತಾಧಿಕಾರಿ ಎಸ್.ರಾಚಯ್ಯ ಅವರು ಮಾತನಾಡಿ ಹೊಸ ನ್ಯಾಯಾಲಯ ಆರಂಭವಾಗಿದೆ. ಪ್ರಕರಣಗಳನ್ನು ಆದಷ್ಟು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದರು.

ಹೈಕೋರ್ಟ್‌ ನ್ಯಾಯಾಧೀಶ ಸಿ.ಎಂ.ಪೂಣಚ್ಚ ಅವರು ಮಾತನಾಡಿ ಪೊನ್ನಂಪೇಟೆಯಲ್ಲಿ ಎಲ್ಲಾ ರೀತಿಯ ನ್ಯಾಯಾಂಗ ವ್ಯವಸ್ಥೆ ಒದಗಿಸಿರುವುದು ಇಲ್ಲಿನ ಜನರಿಗೆ ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ನ್ಯಾಯಾಂಗ ಸೌಲಭ್ಯಗಳು ತಲುಪಬೇಕು ಎಂದರು.

ಹೈಕೋರ್ಟ್‌ ನ್ಯಾಯಾಧೀಶರಾದ ಕೆ.ಜಿ.ಶಾಂತಿ ಹಾಗೂ ಕೆ.ಎಸ್.ಭರತ್ ಕುಮಾರ್ ಅವರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ವಿವರಿಸಿದರು. ವಕೀಲರಾದ ಎಂ.ಸುರೇಶ್ ಅಯ್ಯಪ್ಪ ಅವರು ಮಾತನಾಡಿ ಪೊನ್ನಂಪೇಟೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ ಆಗಿರುವುದಕ್ಕೆ ಹಲವರ ಶ್ರಮ ಇದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರಾದ ಮಾರುತಿ ಎಸ್. ಬಗಡೆ, ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಂ.ಜಿ.ರಾಕೇಶ್, ಕಾರ್ಯದರ್ಶಿ ಗಿರೀಶ್ ಅಣ್ಣಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೊಡ, ತಹಸೀಲ್ದಾರ್ ಸಂಜನಾ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್(ಮಡಿಕೇರಿ), ಅಭಿಮನ್ಯು ಕುಮಾರ್ (ಸೋಮವಾರಪೇಟೆ), ಆರ್.ಕೆ.ನಾಗೇಂದ್ರ ಬಾಬು (ಕುಶಾಲನಗರ), ಸಿ.ಕೆ.ಪೂವಣ್ಣ(ವಿರಾಜಪೇಟೆ) ಇತರರು ಇದ್ದರು. ವಕೀಲರಾದ ಎಂ.ಸುರೇಶ್ ಅಯ್ಯಪ್ಪ ಅವರನ್ನು ಗೌರವಿಸಲಾಯಿತು. ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ.ರಾಕೇಶ್ ಸ್ವಾಗತಿಸಿದರು. ವಕೀಲರಾದ ಸಂಜೀವ ನಿರೂಪಿಸಿದರು. ವಕೀಲ ಕಂಜಿತಂಡ ಅನಿತಾ ಅವರು ಪೊನ್ನಂಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಸುಧಾ ಪ್ರಸಾದ್ ಮತ್ತು ತಂಡದವರು ವಂದೇ ಮಾತರಂ ಹಾಗೂ ನಾಡಗೀತೆ ಹಾಡಿದರು.