ಸಾರಾಂಶ
ಕನ್ನಡ ಭಾಷೆಯಲ್ಲ ಶಕ್ತಿಯುಳ್ಳ ಭಾಷೆಯಾಗಿದೆ. ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದ್ದು ಐಟಿ-ಬಿಟಿ ಕ್ಷೇತ್ರದಲ್ಲೂ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.
ಹುಬ್ಬಳ್ಳಿ:
ಕನ್ನಡ ಕೇವಲ ಭಾಷೆಯಲ್ಲ ಅದೊಂದು ಶಕ್ತಿಯಾಗಿದ್ದು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಬದುಕಿನ ಜ್ಯೋತಿರ್ಲಿಂಗವಾಗಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿಯ ಸಿದ್ಧಾರೂಢಮಠದ ಆವರಣದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜಯಪುರದ ಸಿದ್ಧೇಶ್ವರ ಶ್ರೀಗಳು ಬದುಕಿನ ಜ್ಞಾನ ತಿಳಿಸಿದ್ದು ಕನ್ನಡ ಭಾಷೆಯಲ್ಲಿಯೇ ಎಂದ ಅವರು, ಕನ್ನಡ ಭಾಷೆಯಲ್ಲ ಶಕ್ತಿಯುಳ್ಳ ಭಾಷೆಯಾಗಿದೆ. ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದ್ದು ಐಟಿ-ಬಿಟಿ ಕ್ಷೇತ್ರದಲ್ಲೂ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅಭಿವೃದ್ಧಿಗೆ ಪಕ್ಷಭೇದ ಬೇಡ:
ಹುಬ್ಬಳ್ಳಿ-ಧಾರವಾಡ ದೊಡ್ಡ ನಗರವಾಗಿದ್ದು, ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳು ಅನುಷ್ಠಾನವಾಗಬೇಕಿದೆ. ನಗರದ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಶ್ರಮಿಸಬೇಕು ಎಂದು ಕರೆ ನೀಡಿದರು.ಕನ್ನಡ ಫಲಕ:
ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಆದೇಶದಂತೆ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಬರಹವಿರಬೇಕು. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು. ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಗರದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ನಗರ ವ್ಯಾಪ್ತಿಯಲ್ಲಿ ಜಿಐಎಸ್ ಸರ್ವೇ ನಡೆಸಿದ ಮೊದಲ ಮಹಾನಗರ ಪಾಲಿಕೆ ನಮ್ಮದಾಗಿದ್ದು, ಎಲ್ಇಡಿ ಬೀದಿದೀಪ ಅಳವಡಿಕೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ಈ ವೇಳೆ ಉಪಮೇಯರ್ ಸಂತೋಷ ಚವ್ಹಾಣ, ಸಿದ್ಧಾರೂಢ ಮಠದ ಟ್ರಸ್ಟ್ ಚೇರಮನ್ ಚನ್ನವೀರ ಮುಂಗರವಾಡಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ರಾಧಾಬಾಯಿ ಸಫಾರೆ, ಉಮೇಶಗೌಡ ಕೌಜಗೇರಿ, ಎಂ.ವೈ. ನರಗುಂದ, ಇಕ್ಬಾಲ್ ನವಲೂರ, ರೂಪಾ ಶೆಟ್ಟಿ, ಶೀಲಾ ಕಾಟ್ಕರ, ಚೇತನ ಹಿರೇಕೆರೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಮೆರವಣಿಗೆ ಚಾಲನೆ...
ರಾಜ್ಯೋತ್ಸವದ ಹಿನ್ನೆಲೆ ಸಿದ್ಧಾರೂಢಮಠದ ಆವರಣದಿಂದ ಇಂದಿರಾ ಗಾಜಿನ ಮನೆಯ ವರೆಗೆ ಕನ್ನಡಾಂಬೆಯ ಭಾವಚಿತ್ರದ ಜತೆಗೆ ವಿವಿಧ ಕಲಾಕೃತಿಗಳ ಸ್ತಬ್ಧ ಚಿತ್ರಗಳ ವರ್ಣರಂಜಿತ ಮೆರವಣಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಂಪೆಯ ಕಲ್ಲಿನ ರಥ ಹಾಗೂ ಚಿತ್ರದುರ್ಗದ ಕಲ್ಲಿನ ಕೋಟೆಯ ಕಲಾಕೃತಿ ಮಾದರಿ, ಪಾಲಿಕೆಯ 12 ವಲಯ ಕಚೇರಿಯಿಂದ ಸ್ವಚ್ಛತೆ ಮತ್ತು ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಬರಹಗಳುಳ್ಳ ಬ್ಯಾನರ್‌ಗಳನ್ನು ಟ್ರ್ಯಾಕ್ಟರ್ ಮೇಲೆ ಅಳವಡಿಸಿ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು ಪಾಲ್ಗೊಂಡು ವೈವಿಧ್ಯಮ ಕಲೆ ಪ್ರದರ್ಶಿಸಿದವು. ಮಕ್ಕಳು ಸೇರಿದಂತೆ ಕೆಲವು ಮಹಿಳೆಯರು ಕನ್ನಡಾಂಬೆ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವನ ವೇಷ ಧರಿಸಿ ಸಂಭ್ರಮಿಸಿದರು.ಕಾಟಾಚಾರದ ಮೆರವಣಿಗೆ...
ಸಿದ್ಧಾರೂಢ ಮಠದ ಮುಖ್ಯದ್ವಾರದ ವರೆಗೆ ಮೆರವಣಿಗೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಹೆಜ್ಜೆ ಹಾಕಿದರು. ಬಳಿಕ ಅಧಿಕಾರಿಗಳು, ಪಾಲಿಕೆ ಸದಸ್ಯರು ಕಣ್ಮರೆಯಾದರು. ಹೀಗಾಗಿ ಮೆರವಣಿಗೆಯಲ್ಲಿ ಜನರೇ ಇರಲಿಲ್ಲ. ಹೀಗಾಗಿ ಕಲಾವಿದರು ಸಹ ಮಾರ್ಗಮಧ್ಯೆದಲ್ಲಿಯೇ ವಾಹನವೇರಿ ಕುಳಿತರು.ಬೆರಳೆಣಿಕೆಯ ಬಾವುಟ
ಕಾರ್ಯಕ್ರಮದ ವೇದಿಕೆ, ಇಂದಿರಾ ಗಾಜಿನ ಮನೆ ಹಾಗೂ ಪಾಲಿಕೆ ಮುಂಭಾಗದಲ್ಲಿ ಮಾತ್ರ ಬೆರಳೆಣಿಕೆಯ ಕನ್ನಡ ಬಾವುಟ ರಾರಾಜಿಸಿದವು. ರಾಜೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಹೋರಾಟಗಾರರು, ಮೆರವಣಿಗೆ ಸಾಗುವ ಮಾರ್ಗ, ಮಹನೀಯರ ಪುತ್ಥಳಿ ಎದುರು ಕನ್ನಡ ಬಾವುಟ ಹಾರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಮೇಯರ್ ಹಾಗೂ ಆಯುಕ್ತರು, 25 ಸಾವಿರ ಅಳವಡಿಸುವ ಭರವಸೆ ನೀಡಿದ್ದರು. ಆದರೆ, ಮೆರವಣಿಗೆ ಸಾಗಿದ ಮಾರ್ಗವಾಗಲಿ, ಹೋರಾಟಗಾರರ ಮೂರ್ತಿಗಳ ಎದುರಾಗಲಿ ಎಲ್ಲಿಯೂ ಕನ್ನಡ ಬಾವುಟ ಕಾಣದಿರುವುದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.;Resize=(128,128))
;Resize=(128,128))