ರಾಜ್ಯದಲ್ಲಿ ಕನ್ನಡ ಅನ್ನದ ಹಾಗೂ ದುಡಿಮೆಯ ಭಾಷೆಯಾಗಬೇಕು. ಕನ್ನಡವೇ ಸಾರ್ವಭೌಮವಾಗಬೇಕು ಎಂದು ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಡಿಗೇರ್ ಮೌನೇಶ್ ಆಶಿಸಿದರು.

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಕನ್ನಡ ಅನ್ನದ ಹಾಗೂ ದುಡಿಮೆಯ ಭಾಷೆಯಾಗಬೇಕು. ಕನ್ನಡವೇ ಸಾರ್ವಭೌಮವಾಗಬೇಕು ಎಂದು ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಡಿಗೇರ್ ಮೌನೇಶ್ ಆಶಿಸಿದರು.

ಪಟ್ಟಣದ ಬೈಪಾಸ್ ರಸ್ತೆಯ ಶ್ರೀ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು.

ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಮತ್ತು ಯುವಕರಲ್ಲಿ ವೈಚಾರಿಕ ಜಾಗೃತಿಗೆ ದತ್ತಿ ಉಪನ್ಯಾಸಗಳು ಪೂರಕ. ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಕಲಿಕೆಗೆ ಸೀಮಿತವಾಗದೇ ಸಾಹಿತ್ತಿಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಜೊತೆಗೆ ಕನ್ನಡ ಭಾಷೆಯ ಅರಿವಿನ ವಿಸ್ತರಣೆಗೂ ಶ್ರಮಿಸಬೇಕು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಶೇಖರ್, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಜಾಗೃತಿ ಮೂಡಿಸುವ ಹಾಗೆಯೇ ಕನ್ನಡ ಭಾಷೆಯಲ್ಲಿ ಪ್ರೌಢಿಮೆ ಸಾಧಿಸುವ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ, ಮೈಸೂರು ಸಂಸ್ಥಾನದ ಒಡೆಯರ್ ಸೇರಿದಂತೆ ಸರ್ ಎಂ. ವಿಶ್ವೇಶ್ವರಯ್ಯ, ಆಲೂರು ವೆಂಕಟರಾಯರು, ಕುವೆಂಪು ಹಾಗೂ ನಾನಾ ಸಾಹಿತಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಹುರಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ ಮತ್ತು ಜಿಪಂ ಮಾಜಿ ಸದಸ್ಯ ಹಾಗೂ ದತ್ತಿ ದಾನಿ ಅಕ್ಕಿ ತೋಟೇಶ್ ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡದಲ್ಲಿ 100ಕ್ಕೆ100 ಹಾಗೂ 125ಕ್ಕೆ 125 ಮತ್ತು ಪಿಯುಸಿ ಪರೀಕ್ಷೆಯ ಕನ್ನಡದಲ್ಲಿ 100ಕ್ಕೆ 100 ಅಂಕ ಗಳಿಸಿರುವ ತಾಲೂಕಿನ 181 ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ದತ್ತಿ ದಾನಿಗಳಾದ ಮಾತಾಗ್ಯಾಸ್ ಲಕ್ಷ್ಮೀ ನಾರಾಯಣ, ಕೋಡಿಹಳ್ಳಿ ರಾಮಲಿಂಗಪ್ಪ, ಸಾಹಿತ್ಯಾಸಕ್ತರಾದ ಗಣೇಶರಾವ್ ಹವಾಲ್ದಾರ್, ವಿ.ಬಿ. ಮಲ್ಲೇಶಪ್ಪ, ಈ. ಕೃಷ್ಣಮೂರ್ತಿ, ಕಸಾಪ ಕಾರ್ಯದರ್ಶಿ ಬ್ಯಾಟಿ ಮಾರುತಿ, ಖಜಾಂಚಿ ಪಿ.ಜೆ. ಪ್ರಹ್ಲಾದ್, ಪುನೀತ್ ಹಾಗೂ ಮತ್ತಿತರರಿದ್ದರು.