ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಕನ್ನಡ ಭಾಷೆ ನಮ್ಮ ಉಸಿರಾಗಲಿ. ಪ್ರತಿಯೊಬ್ಬ ಕನ್ನಡಿಗರು ಭಾಷಾಭಿಮಾನ ಬೆಳಸಿಕೊಳ್ಳಬೇಕು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಹಾರ ಹಾಕಿ ಸ್ವಾಗತಿಸಿ ಮಾತನಾಡಿದ ಅವರು, ಇಂದು ಎಲ್ಲರಿಗೂ ಕನ್ನಡ ಭಾಷಾಭಿಮಾನ ಅಗತ್ಯವಾಗಿದ್ದು, ಕನ್ನಡ ಭಾಷೆ, ನೆಲ, ಜಲಕ್ಕಾಗಿ ನಾವೆಲ್ಲರೂ ಸದಾ ಸಿದ್ಧರಾಗಿರಬೇಕು. ಅನ್ಯ ಭಾಷೆಗಳನ್ನು ಪ್ರೀತಿಸಿ ಕನ್ನಡ ಭಾಷೆ ಯಾವತ್ತೂ ನಮ್ಮ ಉಸಿರಾಗಿರಬೇಕು. ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಯಶಸ್ವಿಯಾಗಿ ಸಾಗಲಿ ಎಂದು ಶುಭಹಾರೈಸಿದರು.ತಾಲೂಕಿನ ಕೆಲೂರ ಗ್ರಾಮಕ್ಕೆ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯನ್ನು ಇಳಕಲ್ಲ ತಾಲೂಕು ತಹಸೀಲ್ದಾರ್ ಸತೀಶ ಕೂಡಲಗಿ, ಇಳಕಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಮಹಾದೇವ ಕಂಬಾಗಿ ಹಾಗೂ ಇತರರು ಸಂಭ್ರಮದಿಂದ ಸ್ವಾಗತಿಸಿ ತಾಯಿ ಭುವನೇಶ್ವರಿಗೆ ಹಾರ ಹಾಕಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು ಕರವೇ ಪದಾಧಿಕಾರಿಗಳು ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು.