ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೆಸ್ ಸ್ಥಿತಿ ಇನ್ನೆರಡು ತಿಂಗಳಲ್ಲಿ ಏನಾಗಲಿದೆ ಎಂಬುದನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಾದು ನೋಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾರ್ಮಿಕವಾಗಿ ನುಡಿದರು.ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರ ಜತೆ ಸಭೆ ನಡೆಸಿ ಮಾತನಾಡಿದರು. ಮೈಸೂರು ಮುಡಾ ಹಗರಣ ಯಾವ ದಿಕ್ಕಿಗೆ ತಲುಪಿದೆ ಎಂಬುದು ನೀವುಗಳೇ ನೋಡುತ್ತಿದ್ದೀರಿ. ಅಧಿಕಾರದ ದಾಹ ಮೇರೆ ಮೀರಿದ್ದು ಎಲ್ಲವೂ ಅಯೋಮಯವಾಗಿದೆ. ಸಿಎಂ ಗಾದಿಗೆರಲು ಸಚಿವರೇ ಪೈಪೋಟಿಗೆ ಬಿದ್ದಿರುವುದು ಅನಾವರಣಗೊಂಡಿದೆ. ಮುಂಬರುವ ದಿನಗಳಲ್ಲಿ ಎಲ್ಲವೂ ರಾಜ್ಯದ ಜನತೆಗೆ ಗೊತ್ತಾಗಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇಬಿಟ್ಟಿತು ಎಂದು ಬೆಳಗ್ಗೆ ಬೀಗಿದ್ದವರಿಗೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ತಕ್ಕ ಉತ್ತರ ನೀಡಿದ್ದು ರಾಜ್ಯದಲ್ಲಿಯೂ ಏನೇನೋ ಬೆಳವಣಿಗೆಗಳು ನಡೆದಿವೆ ಕಾದು ನೋಡಿ ಎಂದು ಹೇಳಿದರು.
ಚಾಟಿ: ಕಳೆದ ಹದಿನೈದು ವರ್ಷಗಳಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ಪಡೆದು ಪಕ್ಷದ್ರೋಹ ಮಾಡಿದವರಿಗೆ ಉತ್ತರ ನೀಡಲು ಹೋಗುವುದಿಲ್ಲ. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರು, ಪ್ರಜ್ವಲ್ ರೇವಣ್ಣ ಸಂಸದರ ನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಅನುದಾನದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಯಡಿಯೂರಪ್ಪ, ಎಚ್‌ಡಿಕೆ ಹಾಗೂ ಬಸವರಾಜಬೊಮ್ಮಾಯಿ ಅವರಿಗೆ ಜೈಕಾರ ಹಾಕಿದ ವ್ಯಕ್ತಿ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಉಘೇ ಎನ್ನುತ್ತಿದ್ದಾರೆ ಎಂದು ಗೃಹಮಂಡಳಿ ಅಧ್ಯಕ್ಷ,ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷ ಮಾತಿನ ಚಾಟಿ ಬೀಸಿದರು.ಒಟ್ಟಾಗಿ: ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಕಾರ್ಯಕರ್ತರು ಶೀಘ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದ್ದು ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು. ಎಲ್ಲವನ್ನು ಸಮಾಧಾನದಿಂದಲೇ ಆಲಿಸಿದ ಎಚ್.ಡಿ.ರೇವಣ್ಣ ಪಕ್ಷದ ಹಿತ ಮುಖ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು. ಕಾರ್ಯಕರ್ತರು ಹಾಗೂ ಮುಖಂಡರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ.ಆರೋಪ, ಪ್ರತ್ಯಾರೋಪ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಸಂಘಟನೆಯಲ್ಲಿ ತೊಡಗಿಕೊಂಡಲ್ಲಿ ಮಾತ್ರವೇ ಗೆಲುವು ಸಾಧ್ಯವಾಗಲಿದೆ.ನಿಮ್ಮೊಂದಿಗೆ ನಾವಿದ್ದೇವೆ ಹೆದರಬೇಡಿ, ಡಿಸಿ-ಗೀಸಿ ಏನು ಮಾಡಲಾಗದು ನಡೆಯಿರಿ ಎಂದು ಉತ್ಸಾಹ ತುಂಬಿದರು.ಮುಖಂಡ ಎನ್ ಆರ್. ಸಂತೋಷ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯ ಸಿ.ಗಿರೀಶ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ತಾಪಂ ಮಾಜಿ ಸದಸ್ಯ ಹೊಸೂರು ಗಂಗಾಧರ್,ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ಮುಖಂಡರಾದ ಗಂಡಸಿ ಮಂಜಣ್ಣ, ಬಿ.ಜಿ.ನಿರಂಜನ್, ಹರ್ಷವರ್ಧನ್‌ರಾಜ್, ಗ್ರಾಪಂ ಸದಸ್ಯ ಉಮೇಶ್,ಗಣೇಶ್, ರವಿ, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.