ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕನ್ನಡ ಸಾಹಿತ್ಯ ಬೆಳವಣಿಗೆಗಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಹಾಗೂ ಸರ್ವ ಭಾಷಿಕರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.ತಾಲೂಕಿನ ಐಗೂರು ಗ್ರಾಮದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ಕಸಬಾ ಘಟಕದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕೇವಲ 53 ಸದಸ್ಯರಿದ್ದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇಂದು 3500 ಸದಸ್ಯರಿದ್ದಾರೆ. ಹತ್ತು ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಶಕ್ತಿ ಮತ್ತು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸದಸ್ಯತ್ವ ಆಂದೋಲನ ಮಾಡಬೇಕೆಂದು ಕರೆನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, 109 ವರ್ಷ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಹೆಮ್ಮರವಾಗಿ ಬೆಳೆದಿದೆ. ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭ ಸ್ವತಂತ್ರ ಸಿ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು ಬೇಷರತ್ತಾಗಿ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಿದ್ದರಿಂದ ಜಿಲ್ಲೆಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕಾವೇರಿ ನೀರು ಮತ್ತು ಕೊಡಗು ಸೇರ್ಪಡೆಗೊಳಿಸಿ ಇದ್ದ ಲೋಕಸಭಾ ಸ್ಥಾನವನ್ನು ಕೆಳೆದುಕೊಳ್ಳಬೇಕಾಯಿತು. ಈ ಹಿನ್ನೆಲೆಯಲ್ಲಿ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ, ತಾಲೂಕು ಘಟಕದ ಕಾರ್ಯದರ್ಶಿ ಜ್ಯೋತಿ, ಕೆ.ಪಿ. ದಿನೇಶ್, ಗೌರವ ಕಾರ್ಯದರ್ಶಿ ಸರಳಾಕುಮಾರಿ, ಕೋಶಾಧಿಕಾರಿ ಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್‌ಕುಮಾರ್ ಮತ್ತಿತರರು ಇದ್ದರು.ಇದೇ ಸಂದರ್ಭ ಹೋಬಳಿ ಘಟಕಕ್ಕೆ ನೆರವು ನೀಡಿದ ಸ್ಥಳೀಯರಾದ ಮಚ್ಚಂಡ ಅಶೋಕ್, ಕೆ.ಪಿ. ರೋಷನ್, ಕಸಬ ಹೋಬಳಿ ಘಟಕದ ಸಂವಹನ ಕಾರ್ಯದರ್ಶಿ ವಿಶ್ವನಾಥ ರಾಜೇ ಅರಸ್, ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ದಾಮೋದರ್, ನಿವೃತ್ತ ಡಿವೈಎಸ್‌ಪಿ ಕೂಡಕಂಡಿ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.