ಜಿಲಿಟಿನ್‌ ಕಡ್ಡಿ ಸ್ಫೋಟ: ವಿದ್ಯಾರ್ಥಿ ಬೆರಳುಗಳು ಕಟ್‌

| Published : Oct 10 2024, 02:26 AM IST

ಸಾರಾಂಶ

ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ತಂದಿದ್ದ ಜಲ್ಲಿಕಲ್ಲಿನಲ್ಲಿದ್ದ ಜಿಲಿಟಿನ್‌ ಕಡ್ಡಿ ಸ್ಫೋಟವಾಗಿ ಹತ್ತನೇ ತರಗತಿ ವಿದ್ಯಾರ್ಥಿಯ ಬೆರಳುಗಳು ತುಂಡಾದ ಘಟನೆ ತಾಲೂಕಿನ ಸಿಎಸ್‌ ಪುರ ಸಮೀಪದ ಇಡಗೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ತಂದಿದ್ದ ಜಲ್ಲಿಕಲ್ಲಿನಲ್ಲಿದ್ದ ಜಿಲಿಟಿನ್‌ ಕಡ್ಡಿ ಸ್ಫೋಟವಾಗಿ ಹತ್ತನೇ ತರಗತಿ ವಿದ್ಯಾರ್ಥಿಯ ಬೆರಳುಗಳು ತುಂಡಾದ ಘಟನೆ ತಾಲೂಕಿನ ಸಿಎಸ್‌ ಪುರ ಸಮೀಪದ ಇಡಗೂರಿನಲ್ಲಿ ನಡೆದಿದೆ. ಮೋನೀಶ್‌ ಗೌಡ ( 15) ಗಾಯಗೊಂಡ ವಿದ್ಯಾರ್ಥಿ. ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ನಡೆಸಲಾಗುತ್ತಿದ್ದು ಈ ವೇಳೆ ತರಗತಿಗೆ ಆಗಮಿಸಿದ್ದ ಮೋನಿಶಗೌಡನಿಗೆ ಶಾಲಾ ಆವರಣದಲ್ಲಿ ಕೌಂಪೌಂಡ್‌ ನಿರ್ಮಾಣಕ್ಕೆಂದು ಹಾಕಲಾಗಿದ್ದ ಜಲ್ಲಿಕಲ್ಲಿನಲ್ಲಿ ವಾಯರ್ ಒಂದು ಕಂಡು ಬಂದಿದೆ. ಈ ವೇಳೆ ಕುತೂಹಲದಿಂದ ವೈಯರ್‌ ಎಳೆದಿದ್ದು ಜಲಿಟಿನ್‌ ಕಡ್ಡಿಗಳು ಸಮೇತ ಹೊರಗೆ ಬಂದಿವೆ. ಆಗ ಅದನ್ನು ಕೈಯಲ್ಲಿ ಹಿಡಿದುಕೊಂಡ ವೇಳೆ ಅದು ಬಿಸಿಯಾಗತೊಡಗಿದ್ದರಿಂದ ಎಸೆಯಲು ಮುಂದಾದಾಗ ಜಿಲಿಟಿನ್‌ ಕಡ್ಡಿಗಳು ಸ್ಫೋಟಗೊಂಡಿದ್ದು ವಿದ್ಯಾರ್ಥಿಯ ಬೆರಳುಗಳು ತುಂಡಾಗಿವೆ. ಸ್ಫೋಟದ ತೀವ್ರತೆ ಸುಮಾರು 1 ಕಿಮೀಗೂ ಹೆಚ್ಚು ವ್ಯಾಪಿಸಿದ್ದು ಕ್ಷಣಕಾಲ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿ ಬಹುತೇಕರು ಸ್ಥಳಕ್ಕೆ ಬಂದು ನೋಡಿದ್ದಾರೆ. ಕೂಡಲೇ ಗಾಯಾಳು ವಿದ್ಯಾರ್ಥಿಯನ್ನು ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ಗೋಪಿನಾಥ್ ತಕ್ಷಣ ಘಟನೆ ನಡೆದ ಸ್ಥಳ ಪರಿಶೀಲಿಸಿ ಇನ್ನೂ ಕೆಲವು ಜೀವಂತ ಜಿಲಟಿನ್ ಕಡ್ಡಿ ಇರುವ ಬಗ್ಗೆ ಖಚಿತ ಮಾಡಿಕೊಂಡು ಕೂಡಲೇ ಈ ಕಲ್ಲು ರಾಶಿ ಸುತ್ತಲಿನ ನೂರು ಮೀಟರ್ ನಿರ್ಬಂಧಿಸಿ ಮರಳು ತಂದು ಜಿಲಟಿನ್ ಕಡ್ಡಿ ಕಂಡ ಎಲ್ಲಾ ಕಲ್ಲು ಬಂಡೆ ರಾಶಿಯನ್ನು ಸುರಕ್ಷಿತಗೊಳಿಸಿದರು. ಸ್ಥಳೀಯ ಪಂಚಾಯಿತಿ ಸದಸ್ಯ ಸುಶಾಂತಗೌಡ ಈ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ತಿಳಿದು ಪೊಲೀಸರು ಕೂಡಲೇ ಸ್ಥಳಕ್ಕೆ ಬರಲು ಸೂಚಿಸಿ ಗಾಯಾಳು ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನಡೆಸಲು ಸೂಚಿಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು.ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹಾಗೂ ಭೂ ವಿಜ್ಞಾನಿ ಸಂತೋಷ್ ಕುಮಾರ್ ಜಿಲಟಿನ್ ಕಡ್ಡಿ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ ಇಓ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿಷೇಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.