ನಾವು ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿಯನ್ನು ಹುಡುಕಿದರೆ ಕೆಲವೊಮ್ಮೆ ದೊರೆಯುವುದಿಲ್ಲ, ದೊರೆತರೂ ಅದು ಪೂರ್ಣರೂಪದಲ್ಲಿ ಇರುವುದಿಲ್ಲ. ಕಾರಣ ಕನ್ನಡಿಗರೇ ಇಂಗ್ಲಿಷ್ ನಲ್ಲಿ ಮಾಹಿತಿ ಹುಡುಕುವ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಕನ್ನಡಿಗರು ಗೂಗಲ್ ಸೇರಿದಂತೆ ಅನೇಕ ಅಂತರ್ಜಾಲದಲ್ಲಿ ಕನ್ನಡದಲ್ಲಿಯೇ ಮಾಹಿತಿಯನ್ನು ಹುಡುಕುವ ಪ್ರಯತ್ನ ಮಾಡಬೇಕು. ಜಗತ್ತಿಗೆ ಕನ್ನಡದ ಶ್ರೇಷ್ಠತೆ ಅರಿವಾಗಬೇಕು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು, ಯುವ ಜನರಿಂದ ಕನ್ನಡ ಉಳಿಸಿಕೊಳ್ಳಲು ನಾವು ಹೊಸಹೊಸ ಅವಿಷ್ಕಾರ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ನೆಲಮಂಗಲ

ಕಾಲ ಬದಲಾದಂತೆ ಮನುಷ್ಯನ ಜೀವನ ಶೈಲಿ ಬದಲಾಗುತ್ತಿದೆ. ಆದ್ದರಿಂದ ಪುಸ್ತಕ ರೂಪದ ಕನ್ನಡ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಸೇರ್ಪಡೆ ಮಾಡಿ ಇಂದಿನ ಯುವಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ದರಾಜು ಸ್ವಾಮೀಜಿ ತಿಳಿಸಿದರು.

ನಗರದ ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿಯನ್ನು ಹುಡುಕಿದರೆ ಕೆಲವೊಮ್ಮೆ ದೊರೆಯುವುದಿಲ್ಲ, ದೊರೆತರೂ ಅದು ಪೂರ್ಣರೂಪದಲ್ಲಿ ಇರುವುದಿಲ್ಲ. ಕಾರಣ ಕನ್ನಡಿಗರೇ ಇಂಗ್ಲಿಷ್ ನಲ್ಲಿ ಮಾಹಿತಿ ಹುಡುಕುವ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಕನ್ನಡಿಗರು ಗೂಗಲ್ ಸೇರಿದಂತೆ ಅನೇಕ ಅಂತರ್ಜಾಲದಲ್ಲಿ ಕನ್ನಡದಲ್ಲಿಯೇ ಮಾಹಿತಿಯನ್ನು ಹುಡುಕುವ ಪ್ರಯತ್ನ ಮಾಡಬೇಕು. ಜಗತ್ತಿಗೆ ಕನ್ನಡದ ಶ್ರೇಷ್ಠತೆ ಅರಿವಾಗಬೇಕು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು, ಯುವ ಜನರಿಂದ ಕನ್ನಡ ಉಳಿಸಿಕೊಳ್ಳಲು ನಾವು ಹೊಸಹೊಸ ಅವಿಷ್ಕಾರ ಮಾಡಬೇಕಾಗಿದೆ ಎಂದರು.

ಕನ್ನಡ ಶಾಸನ ಉಳಿಸಿ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂರಾರು ಕನ್ನಡ ಶಾಸನಗಳು ಪತ್ತೆಯಾಗಿವೆ, ಆದರೆ ಸಂಬಂಧ ಪಟ್ಟ ಇಲಾಖೆಗಳು ಅವುಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರದ ಸಂಗತಿ. ಮುಂದಿನ ಶತಮಾನಗಳಿಗೆ ಅವುಗಳನ್ನು ರಕ್ಷಣೆ ಮಾಡಿಕೊಂಡರೆ ಕನ್ನಡ ಭಾಷೆಯ ಶ್ರೇಷ್ಠತೆ ಅರಿವಾಗುತ್ತದೆ ಎಂದರು.

ರೈತ ಯುವಕರಿಗೆ ತಾಂತ್ರಿಕ ತರಬೇತಿ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕುಗಳ ರೈತರ ಕೃಷಿ ಜಮೀನನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಸರ್ಕಾರ ವಶಪಡಿಸಿಕೊಳ್ಳುವುದೇ ಆದರೆ, ಭೂಮಿ ಕಳೆದುಕೊಂಡ ರೈತ ಯುವಕರು, ಕೃಷಿ ಕಾರ್ಮಿಕರು ಉದ್ಯೋಗಗಳನ್ನು ಪಡೆದು ಮತ್ತೆ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ತಾಂತ್ರಿಕ ತರಬೇತಿಯನ್ನು ನೀಡಿ ಅವರನ್ನು ಕುಶಲ ತಂತ್ರಜ್ಞರನ್ನಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.

ಎತ್ತಿನ ಹೊಳೆ ನೀರು:

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಮತ್ತು ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದಲೇ ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿಯನ್ನು ಸರ್ಕಾರ ವೇಗವಾಗಿ ಪೂರ್ಣಗೊಳಿಸಿ ರೈತರಿಗೆ ನೀರನ್ನು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕನ್ನಡ ಸಾಹಿತ್ಯದ ಹಬ್ಬಕ್ಕೆ ನನ್ನ ಕ್ಷೇತ್ರ ನೆಲಮಂಗಲ ಆಯ್ಕೆ ಮಾಡಿರುವುದು ಸಂತೋಷವಾಯಿತು. ಅದ್ಭುತ ಕಾರ್ಯಕ್ರಮ ಮೂಡಿಬಂದಿದ್ದು ವಿದ್ಯಾರ್ಥಿಗಳು ನಮ್ಮ ಕನ್ನಡ ಸಾಹಿತ್ಯ ಅರಿಯಬೇಕು. ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೆ ಒಂದು ಕಚೇರಿ ನೀಡುವ ಜತೆ ಮುಂದಿನ ದಿನಗಳಲ್ಲಿ ಕನ್ನಡ ಭವನಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಮೆರುಗು ತಂದ ಮೆರವಣಿಗೆ:

ನೆಲಮಂಗಲದ ಅರಿಶಿನಕುಂಟೆಯಿಂದ ಕುಣಿಗಲ್ ಬೈಪಾಸ್, ಬಸವನಹಳ್ಳಿ ರಸ್ತೆ, ಸೊಂಡೆಕೊಪ್ಪ ರಸ್ತೆಗಳಲ್ಲಿ ಹಳದಿ, ಕೆಂಪು ಬಣ್ಣದಲ್ಲಿ ಶೃಂಗಾರ ಗೊಂಡಿದ್ದ ರಸ್ತೆಗಳಿಂದ ಸಮ್ಮೇಳನಕ್ಕೆ ಒಂದು ಕಡೆ ಮೆರುಗು ಬಂದರೆ, ಪರಿವೀಕ್ಷಣಾ ಮಂದಿರದಿಂದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದವರೆಗೂ 27 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ದರಾಜು ಸ್ವಾಮೀಜಿ ಮೆರವಣಿಗೆ ಅದ್ಧೂರಿಯಾಗಿ ಕಲಾತಂಡಗಳು, ಪೂರ್ಣ ಕುಂಭಗಳ ಮೂಲಕ ನಡೆಯಿತು. 2 ಸಾವಿರಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿಗಳು ,ಮುಖಂಡರ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.

ಧ್ವಜಾರೋಹಣ:

27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜ, ನಾಡಧ್ವಜ , ಪರಿಷತ್ ಧ್ವಜವನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಜಿಲ್ಲಾಧ್ಯಕ್ಷ ಪ್ರೊ. ಕೃಷ್ಣಪ್ಪ, ತಾಲೂಕು ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್ ಧ್ವಜಾರೋಹಣ ಮಾಡುವ ಮೂಲಕ ಆರಂಭ ಮಾಡಿದರು. ವೇದಿಕೆ ಕಾರ್ಯಕ್ರಮದ ನಂತರ ವಿಚಾರ ಗೋಷ್ಠಿ, ಕವಿಗೋಷ್ಠಿ ನಡೆದವು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪುಸ್ತಕ, ಆಹಾರ ಮೇಳ:

ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಪುಸ್ತಕ ಮೇಳ, ಆಹಾರ ಮೇಳ, ದಿನಬಳಕೆ ವಸ್ತುಗಳ ಮೇಳ, ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಶಾಸಕರ ಸಹಕಾರದೊಂದಿಗೆ 2 ಸಾವಿರ ಜನರಿಗೆ ಹಳ್ಳಿ ಸೊಗಡು ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪುಸ್ತಕ ಬಿಡುಗಡೆ:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಚೌಡಯ್ಯನವರು ಬರೆದ ಈ ನೆಲದ ಗುಣಗಳು, ಸಿದ್ಧರಾಮೇಶ್ವರ ಚರಿತ್ರೆ, ಕಿತ್ತೂರು ಕಿಡಿ, ಬೆಳವಡಿ ವಡ್ಡರ ಯಲ್ಲಣ್ಣ ಹಾಗೂ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿಳ್ಳೇಗೌಡರು ಬರೆದ ಹಸಿರು ಉಸಿರು ಪುಸ್ತಕವನ್ನು ಶ್ರೀ ಗಳು, ಗಣ್ಯರು ಬಿಡುಗಡೆ ಮಾಡಿದರು.

ತಾಲೂಕು ಕಸಾಪ ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್ , ಶಿವಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ರಮಣಾನಂದನಾಥ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಕೃಷ್ಣಪ್ಪ, ಎನ್ ಪಿಎ ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಸದಸ್ಯ ಕೃಷ್ಣಮೂರ್ತಿ, ನಿಕಟಪೂರ್ವ ಜಿಲ್ಲಾ ಸಮ್ಮೇಳನಾಧ್ಯಕ್ಷ ಕೆಂಪಣ್ಣ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಚಿ.ಮ ಸುಧಾಕರ್, ಕಸಾಪ ಗೌರವ ಕಾರ್ಯದರ್ಶಿ ಡಾ.ಗಂಗರಾಜು, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಕೊಟ್ರೇಶ್ ಆರ್., ಕಸಾಪ ತಾಲೂಕು ಗೌರವ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ, ಸಿದ್ದಯ್ಯ, ಉಪಾಧ್ಯಕ್ಷ ಮಲ್ಲೇಶ್ , ಗುರುಪ್ರಸಾದ್, ಮುಖಂಡರಾದ ಆನಂದ್ ,ಮಂಜುನಾಥಗೌಡ, ಸಿ.ಎಂ.ಗೌಡ, ಚಿಕ್ಕೇಗೌಡ, ಚಿಕ್ಕಣ್ಣ ಸೇರಿ ತಾಲೂಕು ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.