ಸಾರಾಂಶ
ಶಿಗ್ಗಾಂವಿ: ಕಸಾಪ ಸಮಾಜದ ಎಲ್ಲರನ್ನೂ ಒಳಗೊಂಡ ವಿಶಾಲ ವ್ಯಾಪ್ತಿ ಹೊಂದಿದೆ. ಸಾಹಿತ್ಯ ಸೌರಭ ಮರುಕಳಿಸುವ ಮೂಲಕ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ, ಹಿರಿಯ ಸಾಹಿತಿಗಳ ಅನುಭವಗಳನ್ನು ಪಸರಿಸುವ ಕಾರ್ಯ ಮಾಡಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಕಾರ್ಯನಿರತ ಪತ್ರಕರ್ತರ ಸಂಘ, ಪಂ. ಪುಟ್ಟರಾಜ ಕವಿ ಗವಾಯಿಗಳ ಕಲಾಸಂಸ್ಥೆ, ಪೃಥ್ವಿ ಆರಿ ವರ್ಕ್ ಇವರ ಸಹಯೋಗದಲ್ಲಿ ನಡೆದ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕು ಪುಸ್ತಕಗಳ ಮಟ್ಟದಲ್ಲಿ ವಿಮರ್ಶೆ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಸಂಗನಬಸವ ಸ್ವಾಮಿಗಳು ಮಾತನಾಡಿ, ಸಮಾಜಕ್ಕೆ ಮೌಲ್ಯಗಳನ್ನು ತುಂಬುವ ಕಾರ್ಯಗಳ ಜತೆಗೆ ಜ್ಞಾನ, ದಾನಗಳ ಸಂಗಮವಾಗುವ ಮೂಲಕ ಪ್ರತಿಯೊಬ್ಬರಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.ಕಸಾಪ ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವದ ನಿಟ್ಟಿನಲ್ಲಿ ಕನ್ನಡ ಕಟ್ಟುವ ಕಾರ್ಯ ನಡೆದಿದೆ. ತಾಲೂಕಿನ ವಿವಿಧ ಸಂಘಟನೆಗಳ ಮತ್ತು ಗಣ್ಯರ ಸಹಕಾರದಿಂದ ಕಸಾಪ ಹಲವಾರು ಯಶಸ್ವಿ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿದೆ ಎಂದರು.ಉಪನ್ಯಾಸಕ ಶಶಿಕಾಂತ ರಾಠೋಡ ಅವರು, ಶಿವಾನಂದ ಮ್ಯಾಗೇರಿಯವರ ಶಿಗ್ಗಾಂವಿ ಊರು ಸಾಹಿತ್ಯ ನೂರು ಕೃತಿಯನ್ನು ವಿಮರ್ಶಿಸಿದರು. ಶಿಕ್ಷಕ ದೇವರಾಜ ಹುಣಸಿಕಟ್ಟಿ ಅವರು ಶಕುಂತಲಾ ಕೋಣನವರ ಅವರ ಚಿತ್ತದೊಳಗಿನ ಚಿತ್ತಾರ ಕೃತಿಯನ್ನು ವಿಮರ್ಶಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧನೆಗೈದ ಪತ್ರಕರ್ತ ಸಂಘದ ಅಧ್ಯಕ್ಷ ಪರಮೇಶ ಲಮಾಣಿ, ಪತ್ರಕರ್ತ ಬಸವರಾಜ ಹೊನ್ನಣ್ಣನವರ, ರೈತ ಸಂಘಟನೆ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡೆಮ್ಮಿ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಮ್ಯಾಗೇರಿ, ಶಕುಂತಲಾ ಕೋಣನವರ, ಮಾಂತೇಶ ನಾಕ್ಕೋಡಿ, ಫಕ್ಕಿರೇಶ ಕೊಂಡಾಯಿ, ಶಂಭು ಕೇರಿ, ಲಕ್ಷ್ಮೀ ಕಾಡಪ್ಪನವರ, ಬಸವರಾಜ ಶಿಗ್ಗಾಂವಿ, ಶಶಿಕಾಂತ ರಾಠೋಡ, ಶರೀಫ್ ಮಾಕಪ್ಪನವರ, ದೇವರಾಜ ಹುಣಸಿಕಟ್ಟಿ ಮುಂತಾದವರಿದ್ದರು.