ಸಾರಾಂಶ
ಕಾವೇರಿ ಆಸ್ಪತ್ರೆಯ ಸಮೂಹವು ನಗರದ ಮಾರತ್ತಹಳ್ಳಿಯಲ್ಲಿ ನೂತನವಾಗಿ ಆರಂಭವಾಗಿರುವ ದಕ್ಷಿಣ ಭಾರತದ 12ನೇ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾವೇರಿ ಆಸ್ಪತ್ರೆಯ ಸಮೂಹವು ನಗರದ ಮಾರತ್ತಹಳ್ಳಿಯಲ್ಲಿ ನೂತನವಾಗಿ ಆರಂಭವಾಗಿರುವ ದಕ್ಷಿಣ ಭಾರತದ 12ನೇ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾವೇರಿ ಆಸ್ಪತ್ರೆಯ ಮತ್ತೊಂದು ಶಾಖೆಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿರುವುದಕ್ಕೆ ಸಂತೋಷವಾಗಿದೆ. ಈ ಆಸ್ಪತ್ರೆಯು ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುತ್ತಾ ಮತ್ತಷ್ಟು ಬೆಳೆಯಲಿ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಆಸ್ಪತ್ರೆಗಳನ್ನು ಆರಂಭಿಸುವ ಯೋಜನೆಯನ್ನು ಈ ಸಮೂಹದ ಆಸ್ಪತ್ರೆ ಹೊಂದಿದೆ ಎಂದು ಗೊತ್ತಾಗಿದೆ. ಮುಂದಿನ ಎಲ್ಲಾ ಯೋಜನೆಗಳಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.
ಕಾವೇರಿ ಆಸ್ಪತ್ರೆಯ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಡಾ। ಎಸ್.ಚಂದ್ರಶೇಖರ್ ಮಾತನಾಡಿ, ದಶಕಗಳಿಂದ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ನಮ್ಮ ಆಸ್ಪತ್ರೆಯ ಸಮೂಹವು, ಮಾರತ್ತಹಳ್ಳಿಯಲ್ಲಿ ನೂತನ ಆಸ್ಪತ್ರೆಯನ್ನು ಆರಂಭಿಸಿದ್ದು ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸೌಲಭ್ಯವನ್ನು ನೀಡಲು ಬದ್ಧವಾಗಿದೆ. ಚೆನ್ನೈ, ಸೇಲಂ, ಹೊಸೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಆಸ್ಪತ್ರೆಗಳನ್ನು ಆರಂಭಿಸಿರುವ ಕಾವೇರಿ ಆಸ್ಪತ್ರೆ ಸಮೂಹಕ್ಕೆ ಇದು 12ನೇ ಹಾಗೂ ಬೆಂಗಳೂರಿನಲ್ಲಿ ಎರಡನೇ ಆಸ್ಪತ್ರೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಆಸ್ಪತ್ರೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ। ಮಣಿವಣ್ಣನ್ ಸೇಲ್ವರಾಜ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ। ಎಸ್.ವಿಜಯಭಾಸ್ಕರನ್ ಉಪಸ್ಥಿತರಿದ್ದರು.