ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು 2018ರಲ್ಲಿ ಕೈಬಿಡಲು ಒಪ್ಪಿಕೊಂಡಿದ್ದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ತೋರಿಸಲಿ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆ ಕುಮಾರಸ್ವಾಮಿಯವರ ಕನಸಿನ ಕೂಸು ಎಂಬುದರಲ್ಲಿ ಎರಡು ಮಾತಿಲ್ಲ. ಸಮಸ್ಯೆ ಹುಟ್ಟು ಹಾಕಿದವರೇ ಈಗ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದ ನೋಟಿಫಿಕೇಶನ್‌ ಯಾರ ಅವಧಿಯಲ್ಲಿ ಹೊರಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ 2018ರಲ್ಲೇ ರೆಡ್‌ ಝೋನ್‌ ತೆರವುಗೊಳಿಸಬೇಕಾಗಿತ್ತು. ಯೋಜನೆ ಕೈಬಿಡುವಂತೆ ರೈತರು ಮನವಿ ಮಾಡಿದರೂ, ಆಗ ಕುಮಾರಸ್ವಾಮಿ ಅದನ್ನು ತಮ್ಮ "ಕನಸಿನ ಕೂಸು " ಎಂದು ಹೇಳಿದ್ದರು. ಈಗ ಅದೇ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ರಾಜಕೀಯ ದ್ವಂದ್ವ ಎಂದು ಟೀಕಿಸಿದರು.

ರೈತರಿಗೆ ಪರಿಹಾರ ನೀಡುವ ವಿಚಾರದಲ್ಲೂ ಕುಮಾರಸ್ವಾಮಿ ಅವರೇ ಶೇಕಡ 40ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ನೀಡುವ ತೀರ್ಮಾನ ಮಾಡಿದ್ದರು ಎಂದು ವಿಡಿಯೋ ಸಾಕ್ಷ್ಯ ಪ್ರದರ್ಶಿಸಿದ ಬಾಲಕೃಷ್ಣ, ಪ್ರಸ್ತುತ ಸರ್ಕಾರ ವಸತಿ ಪ್ರದೇಶಕ್ಕೆ ಶೇ.50 ಹಾಗೂ ವಾಣಿಜ್ಯ ಪ್ರದೇಶಕ್ಕೆ ಶೇ.45ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಭೂಸ್ವಾಧೀನಕ್ಕೆ ಬಹುತೇಕ ರೈತರು ಒಪ್ಪಿಗೆ ನೀಡಿದ್ದಾರೆ. ನೋಟಿಫಿಕೇಶನ್‌ ಆಗಿರುವ ಯೋಜನೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಇವತ್ತಲ್ಲ ನಾಳೆ ಆ ಪ್ರದೇಶ ಅಭಿವೃದ್ಧಿಯಾಗಲೇಬೇಕು. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಭಿವೃದ್ಧಿ ನಡೆಯಬಾರದು ಎಂಬ ಕಾರಣಕ್ಕೆ ವಿರೋಧಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ರಿಯಲ್ ಎಸ್ಟೇಟ್ ದಲ್ಲಾಳಿ ಎಂದು ಕರೆಯುವ ಮುನ್ನ ತಮ್ಮ ಆಸ್ತಿ ಬಗ್ಗೆ ಉತ್ತರಿಸಬೇಕು. ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ. ಚರ್ಚೆಗೆ ಬರಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಬಾಲಕೃಷ್ಣ ಚರ್ಚೆಗೆ ಆಹ್ವಾನಿಸಿದರು.


14ಕೆಆರ್ ಎಂಎನ್ 2.ಜೆಪಿಜಿ

ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ.