ಸಾರಾಂಶ
ಸಂಘ ಸ್ಥಾಪನೆಯಾಗಿ ಹತ್ತು ವರ್ಷಗಳಲ್ಲಿಯೇ ಸ್ವಂತ ನಿವೇಶನ ಹೊಂದಿ ಸ್ವಂತ ಕಟ್ಟಡದಲ್ಲಿಯೇ ಕಾರ್ಯನಿರ್ವಹಣೆ ಆರಂಭಿಸಿತ್ತು ಎನ್ನುವ ಕೀರ್ತಿ ನಮ್ಮ ಈ ಸಂಘಕ್ಕಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳ: ಇಲ್ಲಿನ ಶ್ರೀ ಲಕ್ಷ್ಮೀ ಸರಸ್ವತಿ ಪತ್ತಿನ ಸಹಕಾರಿ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಮೀನುಗಾರಿಕೆ, ಒಳನಾಡು ಜಲಸಾರಿಗೆ ಹಾಗೂ ಬಂದರು ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.
ನಂತರ ಮಾತನಾಡಿ, ಕಳೆದ ೨೫ ವರ್ಷಗಳ ಹಿಂದೆ ಸಮಾಜದ ಹಲವರು ಸೇರಿ ಸಮಾಜದ ಒಳಿತಿಗಾಗಿ ಕಟ್ಟಿಕೊಂಡ ಸಹಕಾರಿ ಸಂಘ ಇದ್ದು, ಉತ್ತಮವಾಗಿ ಕಾರ್ಯನಿರ್ವಹಿಸಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಒಂದು ಸಂಘ ಸ್ಥಾಪನೆಯಾಗಿ ಹತ್ತು ವರ್ಷಗಳಲ್ಲಿಯೇ ಸ್ವಂತ ನಿವೇಶನ ಹೊಂದಿ ಸ್ವಂತ ಕಟ್ಟಡದಲ್ಲಿಯೇ ಕಾರ್ಯನಿರ್ವಹಣೆ ಆರಂಭಿಸಿತ್ತು ಎನ್ನುವ ಕೀರ್ತಿ ನಮ್ಮ ಈ ಸಂಘಕ್ಕಿದೆ. ಕಳೆದ ಹಲವಾರು ವರ್ಷಗಳಿಂದ ನನ್ನ ಬೆಳವಣಿಗೆಯಲ್ಲಿಯೂ ಈ ಸಂಘದ ಕೊಡುಗೆ ಬಹಳಷ್ಟಿದೆ. ನನಗೆ ಆರ್ಥಿಕ ಶಕ್ತಿ ತುಂಬಿದ ಈ ಸಂಸ್ಥೆಯಲ್ಲಿ ೧೫ ವರ್ಷಗಳ ಕಾಲ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ ಎನ್ನುವುದು ನನಗೆ ಹೆಮ್ಮೆಯೆನಿಸುತ್ತಿದೆ. ಪ್ರತಿ ಬಾರಿಯೂ ನಮ್ಮ ಈ ಸಂಸ್ಥೆಯಲ್ಲಿ ಚುನಾವಣೆಯಾಗದೇ ಅವಿರೋಧವಾಗಿ ನಿರ್ದೇಶಕರ ಆಯ್ಕೆ ನಡೆಯುತ್ತಿರುವುದು ಸಂಘದ ಇನ್ನೊಂದು ಗರಿಮೆಯಾಗಿದೆ. ಇದಕ್ಕೆ ಸಮಾಜದ ಎಲ್ಲ ಸದಸ್ಯರ ಸಹಕಾರವೇ ಕಾರಣವಾಗಿದೆ.ಸಂಘ ಮತ್ತಷ್ಟು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀ ಸರಸ್ವತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಭೈರಾ ಮೊಗೇರ ವಹಿಸಿದ್ದರು. ಉಪಸ್ಥಿತರಿದ್ದ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಕೆ.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ನೌಕರ ಎಂ.ವಿ. ವೈದ್ಯ, ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೆ.ಎಂ. ಕರ್ಕಿ. ಮಾಜಿ ಅಧ್ಯಕ್ಷ ಭಾಸ್ಕರ ಮೊಗೇರ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಶ್ರೀಧರ ಅಣ್ಣಪ್ಪ ಮೊಗೇರ, ಮಹಾದೇವ ರಾಮ ಮೊಗೇರ, ಲಕ್ಷ್ಮಣ ಬಿಳಿಯ ಮೊಗೇರ, ಮಾದೇವ ದುರ್ಗಪ್ಪ ಮೊಗೇರ, ವೆಂಕಟ್ರಮಣ ಗೊಂಡ, ನಾಗರತ್ನ ಚಂದಪ್ಪ ಮೊಗೇರ, ಜಾನಕಿ ಅನಿಲ ಮೊಗೇರ ಉಪಸ್ಥಿತರಿದ್ದರು.ನಾಗರತ್ನಾ ಮೊಗೇರ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅನಂತ ಎಂ. ಮೊಗೇರ ವರದಿ ವಾಚಿಸಿದರು. ನಾಗರಾಜ ಮೊಗೇರ ನಿರ್ವಹಿಸಿದರು. ಸಿಬ್ಬಂದಿ ಮಾದೇವಿ ತಿಮ್ಮಪ್ಪ ಮೊಗೇರ ವಂದಿಸಿದರು.