ಸಾರಾಂಶ
ಶಿವಮೊಗ್ಗ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ 225ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚುನಾವಣೆಗಳ ಕಾವು ನಾವು ನಂಬಿ ಬಂದ ಸಾಮಾಜಿಕ ನಂಬಿಕೆಗಳನ್ನೇ ಗಾಸಿ ಮಾಡುವಂತೆ ಕಾಣುತ್ತಿದ್ದು, ಅಂತಹ ಸಮಾಜದ ಆತಂಕಗಳಿಗೆ ಸಾಹಿತ್ಯ ದಾರಿ ದೀಪವಾಗಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 225 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಜನರಿರುವಲ್ಲಿಗೆ ತೆರಳಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ತರುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯ ಅನೇಕ ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲೂ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಸಂಘಟಿಸಿದ್ದೇವೆ ಎಂದರು.ಎಲ್ಲಿ ಸಾಹಿತ್ಯ ಹುಣ್ಣಿಮೆ ನಡೆಯುತ್ತೋ ಅಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆಗೆ ಕರೆತಂದು ಸುತ್ತಲಿನವರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದೇವೆ. ಆ ಎಲ್ಲಾ ಪ್ರತಿಭೆಗಳು ಸಮಾಜದ ಸ್ವತ್ತಾಗಬೇಕು. ಅವರಿಂದ ಸಮಸಮಾಜದಲ್ಲಿ ಒಳ್ಳೆಯದನ್ನು ಬಿತ್ತುವ ಪ್ರಯತ್ನ ನಮ್ಮದಾಗಿದ್ದು, ಇದನ್ನೊಂದು ಆಂದೋಲನದ ರೀತಿಯಲ್ಲಿ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ವ್ಯವಸ್ಥೆ ಸಮಾಜದ ಆತಂಕಗಳನ್ನು ಸೃಷ್ಟಿಸಿ ಅದರ ಲಾಭ ಪಡೆಯುವ ಪ್ರಯತ್ನದಲ್ಲೇ ಸದಾ ಮಗ್ನರಾಗಿರುವುದನ್ನು ನೋಡುತ್ತಿದ್ದೇವೆ. ಈ ಆತಂಕಗಳಿಗೆ ಸಾಹಿತ್ಯ ದಾರಿದೀಪವಾಗಬೇಕು. ಕವನ, ಕಥೆ, ಪ್ರಬಂಧ, ವಿಚಾರ ಎಲ್ಲವೂ ಅತ್ತ ಗಮನಹರಿಸುವ ಅಗತ್ಯವಿದೆ ಎಂದು ವಿವರಿಸಿದರು.ರಂಗಕರ್ಮಿ ಡಾ.ಜಿ.ಆರ್.ಲವ ಕಥೆ ಹೇಳಿ ಕವನ ವಾಚಿಸಿದರು. ಕವಿಗಳಾದ ಶ್ರೀಕಾಂತ್, ಬಿ.ಟಿ. ಅಂಬಿಕಾ, ಎಸ್. ರುದ್ರೇಶ್ ಆಚಾರ್, ಕುಪ್ಪೇರಾವ್ ಕವನ ವಾಚಿಸಿ ದರು. ಶ್ರೀ ರಾಮಕೃಷ್ಣ ವಿದ್ಯಾಲಯ ಗೋಪಾಳ, ಬಿ.ಜಿ.ಎಸ್. ಆಂಗ್ಲ ಮಾಧ್ಯಮ, ಬಿಜಿಎಸ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಾಡು, ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಭಾರತಿ ರಾಮಕೃಷ್ಣ ಉಪಸ್ಥಿತರಿದ್ದರು. ಪ್ರತಿಮಾ ಡಾಕಪ್ಪ ಪ್ರಾರ್ಥನೆ ಹಾಡಿದರು. ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು. ಬಿ.ಟಿ. ಅಂಬಿಕಾ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಭೈರಾಪುರ ಶಿವಪ್ಪಗೌಡ ವಂದಿಸಿದರು.