ಸಾರಾಂಶ
ಬಾಳೆಹೊನ್ನೂರು, ಕಷ್ಟ ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ನಾವು ಯಾರನ್ನು ನಂಬಬೇಕು ಎಂದು ಕಲಿಸುತ್ತದೆ. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ಲಿಂಗೈಕ್ಯ ಶಿವಾನಂದ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಷ್ಟ ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ನಾವು ಯಾರನ್ನು ನಂಬಬೇಕು ಎಂದು ಕಲಿಸುತ್ತದೆ. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ಧರ್ಮ ಸಮಾರಂಭ ಹಾಗೂ ಲಿಂ.ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬದುಕು ಹಣೆಬರಹದ ಮೇಲೆ ನಿಂತಿಲ್ಲ. ಒಂದಿಷ್ಟು ಆತ್ಮಸ್ಥೈರ್ಯ ಮತ್ತು ಕಠಿಣ ಪರಿಶ್ರಮದಿಂದ ಬದುಕನ್ನು ಬದಲಿಸಿಕೊಳ್ಳುವ ಆಯ್ಕೆ ಅವರವರ ಕೈಯಲ್ಲಿಯೇ ಇದೆ. ಮನುಷ್ಯ ಫಲಭರಿತ ಬಾಳೆಯಂತೆ ಬಾಗಬೇಕು. ಬೀಗಬಾರದು. ಒಳ್ಳೆಯತನಕ್ಕೆ ಬೆಲೆ ಯಿಲ್ಲ ಅನ್ನುವುದು ಎಷ್ಟು ಸತ್ಯವೋ ಆ ಒಳ್ಳೆತನ ನಮ್ಮನ್ನು ಕೈ ಬಿಡುವುದಿಲ್ಲ ಅನ್ನುವುದು ಅಷ್ಟೇ ಸತ್ಯ. ಪೆಟ್ಟು ತಿಂದ ಕಲ್ಲು ಮೂರ್ತಿಯಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಡುವವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜ್ಞಾನಿಗಳಾಗುತ್ತಾರೆ. ಲಿಂ.ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರಮ ಮತ್ತು ಸಾಧನೆ ಮೂಲಕ ವೀರಶೈವ ಧರ್ಮ ಸಂಸ್ಕೃತಿ ಹಾಗೂ ಗುರು ಪೀಠಗಳ ಪಾವಿತ್ರ್ಯತೆ ಹೆಚ್ಚಿಸಿದರು. ರಚನಾತ್ಮಕ ಮತ್ತು ಗುಣಾತ್ಮಕ ಸತ್ಕಾರ್ಯ ಮಾಡಿ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಎಂದು ಪ್ರಖ್ಯಾತರಾದದ್ದನ್ನು ಮರೆಯಲಾಗದು. ಲಿಂ.ಶಿವಾನಂದ ಜಗದ್ಗುರುಗಳ ಹೆಸರಿನಲ್ಲಿ ಬಡ ಮಕ್ಕಳಿಗೆ ವಿದ್ಯಾರ್ಥಿ ನಿಲಯ ಹಾಗೂ ಯಾತ್ರಿ ನಿವಾಸ ನಿರ್ಮಿಸುವ ಮೂಲಕ ಶ್ರೀ ಪೀಠ ಕೃತಜ್ಞತೆ ಸಲ್ಲಿಸಿದೆ ಎಂದರು.ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ ಮಾತನಾಡಿ, ಅದೃಷ್ಟ ನಮ್ಮ ಕೈಯಲ್ಲಿಲ್ಲದೇ ಇರಬಹುದು. ಆದರೆ ನಿರ್ಧಾರ ಇದೆ. ಸರಿಯಾದ ನಿರ್ಧಾರ ಕೈಗೊಳ್ಳುವ ಮೂಲಕ ಧರ್ಮಕ್ಕೆ ಮತ್ತು ಗುರು ಪರಂಪರೆಗೆ ಕೀರ್ತಿ ತಂದ ಯಶಸ್ಸು ಲಿಂ.ಶ್ರೀ ಶಿವಾನಂದ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿ ಮಾತನಾಡಿ, ವೀರಶೈವ ಧರ್ಮ ಸಂಸ್ಕೃತಿ ಸಂವರ್ಧನೆಗೆ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರು, ಲಿಂ.ಪರಮತಪಸ್ವಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಹಾಗೂ ನಾಗನೂರು ಕಾಶೀನಾಥ ಶಾಸ್ತ್ರಿಗಳು ಅಪಾರವಾಗಿ ಶ್ರಮಿಸಿದ್ದನ್ನು ಎಂದೆಂದಿಗೂ ಮರೆಯಲಾಗದು ಎಂದರು.ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜರುಗಲಿರುವ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮದ ಪ್ರಥಮ ಪ್ರಕಟಣೆಯನ್ನು ಇದೆ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರು ಬಿಡುಗಡೆ ಮಾಡಿದರು.ಬೆಳಗೊಳದ ಬಿ.ಎ.ಶಿವಶಂಕರ್, ಬೊಗಸೆ ಬಿ.ಎಂ.ಬೋಜೇಗೌಡ, ಪರದೇಶಪ್ಪನವರ ಮಠದ ಮಧುಕುಮಾರ್, ಬೊಗಸೆ ರುದ್ರೇಗೌಡ, ಸಂಕಪ್ಪ, ಸುಜಾತಾ ಅಳವಂಡಿ, ಮಹಾದೇವಿ ಪಾಟೀಲ, ವೀರೇಶ ಕುಲಕರ್ಣಿ, ರೇಣುಕ, ಶಿವಪ್ರಕಾಶ ಶಾಸ್ತ್ರಿ, ಸಿದ್ಧಲಿಂಗಯ್ಯ ಹಿರೇಮಠ, ಖಾಂಡ್ಯ ಮತ್ತು ಜಾಗರ ಹೋಬಳಿ ಮುಖ್ಯಸ್ಥರು ಪಾಲ್ಗೊಂಡಿದ್ದರು. ಸ್ಮರಣೋತ್ಸವ ಸಮಾರಂಭದ ಅಂಗವಾಗಿ ಲಿಂ. ರಂಭಾಪುರಿ ಶಿವಾನಂದ ಜಗದ್ಗುರುಗಳ ಕರ್ತೃ ಗದ್ದಿಗೆಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಪೂಜೆ ನಡೆಯಿತು. ಶಿವಾನಂದ ವಿದ್ಯಾರ್ಥಿ ನಿಲಯದಲ್ಲಿ ಶಿವಾನಂದ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪ ಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮುಂಜಾನೆ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಅಭಿಷೇಕ, ಶಕ್ತಿತ್ರಯ ಮೂರ್ತಿಗಳಾದ ಚೌಡೇಶ್ವರಿ, ಭದ್ರಕಾಳಿ ಮತ್ತು ಪಾರ್ವತಿ ಮಂಗಲ ಮೂರ್ತಿಗೆ ಕುಂಕುಮಾರ್ಚನೆ ನಡೆಯಿತು. ೦೮ಬಿಹೆಚ್‌ಆರ್ ೧:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಸ್ಮರಣೋತ್ಸವ ಸಮಾರಂಭದ ಅಂಗವಾಗಿ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಕರ್ತೃ ಗದ್ದಿಗೆಗೆ ಶ್ರೀ ರಂಭಾಪುರಿ ಜಗದ್ಗುರು ಪೂಜೆ ಸಲ್ಲಿಸಿದರು.