ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲೇ ಮಂಡ್ಯ ಜಿಲ್ಲೆಯ ಪರಿಚಯವಿದ್ದರೂ ಅಭಿವೃದ್ಧಿ ದೃಷ್ಟಿಯಿಂದಲೂ ಮುನ್ನೆಲೆಗೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮಂಡ್ಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಭಾನುವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಮ್ಮ ನಡೆ ಸ್ವಚ್ಛತೆ ಕಡೆ- ರನ್ ಫಾರ್ ಮಂಡ್ಯ -ಮ್ಯಾರಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಿ.ರವಿಕುಮಾರ್ ಮುಂದಾಳತ್ವದಲ್ಲಿ ಹಾಗೂ ಜಿಲ್ಲಾಧಿಕಾರಿ ಸೇರಿ ಯಶಸ್ವಿಗೊಳಿಸಿದರು. ಅಂದು ಕೂಡ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಮ್ಯಾರಥಾನ್ ಹಮ್ಮಿಕೊಂಡಿದ್ದವು ಎಂದರು.

ಶಾಸಕರಾದ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿದ್ದಾರೆ. ವಿಶ್ವದರ್ಜೆಯ ಸರ್ಕಲ್ ಮಾಡಲು ಕೈಹಾಕಿದ್ದಾರೆ. ಮತಕೊಟ್ಟು ಗೆಲ್ಲಿಸಿದ ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಅವರ ರನ್ ಫಾರ್ ಮಂಡ್ಯ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.


ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ೨೦೪೭ ನೇ ಇಸವಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷ ಪೂರ್ಣಗೊಳ್ಳುತ್ತದೆ. ಆದ್ದರಿಂದ ನಮ್ಮ ದೇಶವನ್ನು ವಿಶ್ವದ ನಂ.೧ ದೇಶವನ್ನಾಗಿ ಮಾಡುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಕೆಲಸಗಳು ಆಗಬೇಕು. ಆ ಕನಸು ನನಸಾಗಬೇಕು ಎಂದರು.

ಮಕ್ಕಳು ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯನ್ನು ಸ್ವಚ್ಛತೆಯಿಂದ ಶುದ್ಧವಾಗಿ ನೋಡಿಕೊಳ್ಳುವ ಕಾರ್ಯ ಮಾಡಬೇಕು. ಇಂದಿನ ಮಕ್ಕಳು ಹಾಗೂ ಯುವಕರು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.

ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ, ಪರಿಸರ ನೈರ್ಮಲ್ಯ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕಸ ವಿಲೇವಾರಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ, ಮನೆ ಶಾಲೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮುಖ್ಯವಾಗಿದೆ. ಪ್ರತಿಯೊಬ್ಬರು ಮೊದಲು ಮನೆಯಿಂದಲೇ ಸ್ವಚ್ಛತೆ ಕಾರ್ಯವನ್ನು ಮಾಡಬೇಕು, ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದರಿಂದ ಜಿಲ್ಲೆಯನ್ನು ಸ್ವಚ್ಛವಾಗಿಡಲು ಸಾಧ್ಯ ಎಂದರು.

ಚಲನ ಚಿತ್ರ ನಟ ವಿರಾಟ್ ಮಾತನಾಡಿ, ಸ್ವಚ್ಛತೆ ಆರೋಗ್ಯದ ಮೂಲ. ಮನೆ ಸುತ್ತಮುತ್ತಲಿನ ಪರಿಸರ, ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಾಂಕ್ರಾಮಿಕ ರೋಗಗಳನ್ನು ತಡೆಯಲು ಅತ್ಯಗತ್ಯ. ಸ್ವಚ್ಛ ಭಾರತ್ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ಸುಂದರ ಪರಿಸರವನ್ನು ನಿರ್ಮಿಸೋಣ ಎಂದರು.

ಚಲನಚಿತ್ರ ನಟಿ ರಾಧಿಕಾ ನಾರಾಯಣ್ ಮಾತನಾಡಿ, ಮನೆಯಿಂದ ಸ್ವಚ್ಛತೆ ಆರಂಭವಾಗಬೇಕು. ಪರಿಸರ ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ನಗರಾಭಿವೃದ್ಧಿ ಕೋಶದ ಯೋಜನಾ ಅಧಿಕಾರಿ ಟಿ.ಎನ್.ನರಸಿಂಹ ಮೂರ್ತಿ, ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮ್ಯಾರಥಾನ್ ಸ್ಪರ್ಧೆ ವಿಜೇತರು

ನಮ್ಮ ನಡೆ ಸ್ವಚ್ಛತೆಯ ಕಡೆ- ರನ್ ಫಾರ್ ಮಂಡ್ಯ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬೆಂಗಳೂರಿನ ರಾಜೇಶ್‌ಕುಮಾರ್-ಪ್ರಥಮ, ಮೈಸೂರಿನ ಪುರುಷೋತ್ತಮ್-ದ್ವಿತೀಯ, ಹಾಸನದ ಶ್ರೀಧರ್- ತೃತೀಯ, ಬೆಂಗಳೂರಿನ ಬ್ರಿಜೇಶ್‌ಕುಮಾರ್ ಹಾಗೂ ಮಂಡ್ಯದ ಭರತ್‌ರೆಡ್ಡಿ ಸಮಾಧಾನಕರ ಬಹುಮಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಜಸ್ಮಿತಾ-ಪ್ರಥಮ, ಡಿವೈಇಎಸ್‌ನ ಗೀತಾಂಜಲಿ-ದ್ವಿತೀಯ, ಮನ್ವಿತಾ-ತೃತೀಯ, ಬಿ.ಎಸ್.ಶ್ರೀ ಹಾಗೂ ಅಕ್ಷರಾ ಸಮಾಧಾನಕರ ಬಹುಮಾನ ಪಡೆದರು.

ಪುರುಷ-ಮಹಿಳೆಯರ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ೧೦ ಸಾವಿರ ರು., ದ್ವಿತೀಯ-೫ ಸಾವಿರ ರು., ತೃತೀಯ-೩ ಸಾವಿರ ರು.ಗಳನ್ನು ನೀಡಲಾಯಿತು.