ಸಾರಾಂಶ
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಬಿ.ನಾಗೇಂದ್ರ ಜೂನ್ 6ರೊಳಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಜೂ.7ರಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಎಚ್ಚರಿಸಿದರು.
ಪಕ್ಷದ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರು. ಅವ್ಯಹಾರದ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹಗರಣದಲ್ಲಿ ಸಚಿವರ ಪಾತ್ರವೂ ಇರುವ ಶಂಕೆಯಿದೆ. ತನಿಖೆ ನಡೆಯುತ್ತಿರುವುದರಿಂದ ಸಚಿವ ನಾಗೇಂದ್ರ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಬೀದಿಗಿಳಿದಿತ್ತು. ಬಳಿಕ ಈಶ್ವರಪ್ಪ ರಾಜೀನಾಮೆ ನೀಡಿದರು. ಇದೀಗ ಸಚಿವ ನಾಗೇಂದ್ರ ಮೇಲೂ ಹಗರಣದ ಆರೋಪ ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆ ಪಡೆದು, ಸೂಕ್ತ ರೀತಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಿಗಮದಲ್ಲಾದ ಅವ್ಯವಹಾರದ ಹಣ ಬೇರೆ ಬೇರೆ ಐಟಿ ಕಂಪನಿಗಳ ಹೆಸರಿಗೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗಿದೆ. ತೆಲಂಗಾಣ ರಾಜ್ಯದ ಚುನಾವಣೆಗೆ ಈ ಹಣ ಬಳಕೆ ಮಾಡಲಾಗಿದೆ ಎಂಬ ಗುಮಾನಿಯಿದೆ. ಚುನಾವಣೆ ಸಂದರ್ಭದಲ್ಲಿಯೇ ಹಣ ಡ್ರಾ ಆಗಿರುವುದರಿಂದ ಹಣ ದುರ್ಬಳಕೆ ಬಗ್ಗೆ ಶಂಕೆಯಿದೆ. ಮಂತ್ರಿಗಳು, ದೊಡ್ಡ ಅಧಿಕಾರಿಗಳು ಶಾಮೀಲಾಗಿ ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದಾರೆ. ಇದರಿಂದ ಪ್ರಾಮಾಣಿಕ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ತನಿಖೆಯಿಂದ ಅವ್ಯವಹಾರವಾಗಿರುವ ಹಣ ಮತ್ತೆ ತರಬಹುದು. ಆದರೆ, ಪ್ರಕರಣದಲ್ಲಿ ಸಾವಿಗೀಡಾದ ಅಧಿಕಾರಿಯನ್ನು ತರಲು ಸಾಧ್ಯವೇ? ಅಧಿಕಾರಿಯ ಪತ್ನಿ, ಮಕ್ಕಳ ಗತಿ ಏನು? ಏನೂ ಮಾಡದ ತಪ್ಪಿಗೆ ಅಧಿಕಾರಿ ಸಾವಿಗೀಡಾಗಿದ್ದು, ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ವಿಪ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಸುರೇಶ್ ಬಾಬು, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಎಸ್.ಗುರುಲಿಂಗನಗೌಡ, ಕೆ.ಎಂ. ಮಹೇಶ್ವರಸ್ವಾಮಿ, ಎಚ್.ಹನುಮಂತಪ್ಪ, ಕೆ.ಎ. ರಾಮಲಿಂಗಪ್ಪ, ಶ್ರೀನಿವಾಸ ಮೋತ್ಕರ್, ಕೆ.ಎಸ್. ದಿವಾಕರ, ಸುರೇಖಾ ಮಲ್ಲನಗೌಡ, ಗೋವಿಂದರಾಜು, ಎರ್ರಂಗಳಿ ತಿಮ್ಮಾರೆಡ್ಡಿ, ಕೋನಂಕಿ ತಿಲಕ್, ಉಡೇದ ಸುರೇಶ್, ಶಿವಶಂಕರ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸಿಒಡಿಗೆ ಬದಲು ಸಿಬಿಐತನಿಖೆಗೆ ವಹಿಸಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದರು.
ನಿಗಮದ ಅವ್ಯವಹಾರದ ಹಣ ಹೊರ ರಾಜ್ಯಗಳಿಗೆ ವರ್ಗಾವಣೆಯಾಗಿರುವುದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ತನಿಖೆಯನ್ನು ಚುರುಕುಗೊಳಿಸುವ ಸಂಬಂಧ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.