ಮೋದಿ ಒಕ್ಕೂಟ ವ್ಯವಸ್ಥೆಯ ಅಧಿಕಾರ ವ್ಯಾಪ್ತಿ ಅರ್ಥಮಾಡಿಕೊಳ್ಳಲಿ

| Published : Apr 18 2024, 02:21 AM IST

ಸಾರಾಂಶ

ಪ್ರಧಾನಿ ಎಂದರೆ ಕಾರ್ಯಾಂಗದ ಮುಖ್ಯಸ್ಥರಷ್ಟೆ. ಆದರೆ ಪ್ರಜಾಪ್ರಭುತ್ವದಲ್ಲಿ ನಾನೇ ಸರ್ವಸ್ವ ಎನ್ನುವುದಕ್ಕೆ ಮಾನ್ಯವಿಲ್ಲ. ಇದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿಗೆ ಕೆಲವು ಮಿತಿಗಳಿವೆ. ಅವರು ಸಂವಿಧಾನವನ್ನು ಚೆನ್ನಾಗಿ ಓದಿಕೊಳ್ಳಬೇಕು. ಮೋದಿ ಅವರು ತಮ್ಮ ಹೆಸರನ್ನು ತಾವೇ ಹೇಳಿಕೊಳ್ಳುತ್ತಾರೆ

- ಕರ್ನಾಟಕ ಬುದ್ಧ ಧಮ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪಕನ್ನಡಪ್ರಭ ವಾರ್ತೆ ಮೈಸೂರು

ಭಾರತದ ಒಕ್ಕೂಟ ವ್ಯವಸ್ಥೆ ಅಧಿಕಾರ ವ್ಯಾಪ್ತಿಯನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು. ಅಮೆರಿಕ, ರಷ್ಯಾ ರಾಷ್ಟ್ರಗಳ ಅಧ್ಯಕ್ಷರಂತೆ ವರ್ತಿಸಬಾರದು ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪ ತಿಳಿಸಿದರು.

ದಲಿತ ಸಂಘರ್ಷ ಸಮಿತಿಯು ಎಂಜಿನಿರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಧೋರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಎಂದರೆ ಕಾರ್ಯಾಂಗದ ಮುಖ್ಯಸ್ಥರಷ್ಟೆ. ಆದರೆ ಪ್ರಜಾಪ್ರಭುತ್ವದಲ್ಲಿ ನಾನೇ ಸರ್ವಸ್ವ ಎನ್ನುವುದಕ್ಕೆ ಮಾನ್ಯವಿಲ್ಲ. ಇದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿಗೆ ಕೆಲವು ಮಿತಿಗಳಿವೆ. ಅವರು ಸಂವಿಧಾನವನ್ನು ಚೆನ್ನಾಗಿ ಓದಿಕೊಳ್ಳಬೇಕು. ಮೋದಿ ಅವರು ತಮ್ಮ ಹೆಸರನ್ನು ತಾವೇ ಹೇಳಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.

2004ರಲ್ಲಿ ಬಿಜೆಪಿ ಪ್ರಣಾಳಿಕೆಯ ಪುಟಗಳಲ್ಲಿ ತಮ್ಮ ಫೋಟೋ ಹಾಕಿದ್ದಕ್ಕೆ ವಾಜಪೇಯಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ವೈಭಿಕರಿಸಿದ್ದನ್ನು ವಿರೋಧಿಸುತ್ತಾರೆ. ಆದರೆ, ಆರ್ಎಸ್ಎಸ್ ನಲ್ಲಿ ತರಬೇತಿ ಪಡೆದವರಿಗೆ ನಾನು ಹೋಗಿ ನಾವು ಬರಬೇಕು. ಆದರೆ, ಮೋದಿ ಅವರಲ್ಲಿ ನಾವು ಅನ್ನೋದು ಇಲ್ಲವೇ ಇಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಸೇರಿ ಅನೇಕರು ಮೋದಿ ಕೈ ಬಲಪಡಿಸಲು ಮತ ನೀಡುವಂತೆ ಕೇಳುತ್ತಾರೆ. ಜನರು ಟಿವಿ ನೋಡಿ ಮತ ಚಲಾಯಿಸುತ್ತಾರೆ. ವರ್ತಮಾನದಲ್ಲಿ ಏನು ನಡೆಯುತ್ತಿದೆ ಎಂಬ ವಿವೇಚನೆಯೇ ಇಲ್ಲದಂತಾಗಿದೆ. ಹೀಗಾದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಲೇಖಕ ಡಾ. ದಿಲೀಪ್ ನರಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಪ್ರಜಾಪ್ರಭುತ್ವದ ತಾಯಿ. ಬುದ್ಧರ ಕಾಲದಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಎಲ್ಲಾ ಸಂಘಗಳಲ್ಲಿ ಆಯ್ಕೆ ಮತ್ತು ನಿರಾಕರಣೆಯ ಅವಕಾಶವಿತ್ತು. 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದ್ದಾಗಿ ಹೇಳಿದರು.

2024ರ ಲೋಕಸಭಾ ಚುನಾವಣೆ ಭಾರತವನ್ನು ಉಳಿಸುವ ಚುನಾವಣೆಯಾಗಿದೆ. ಬಿಜೆಪಿಯವರು ಹಿಂದೂರಾಷ್ಟ್ರ ಮಾಡುವುದಾಗಿ ಹೇಳುತ್ತಾರೆ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಬಿಜೆಪಿಯವರ ಕನಸಿನ ಆರ್ಎಸ್ಎಸ್ ರಾಷ್ಟ್ರ ನಿರ್ಮಾಣ ತಡೆದು ನಿಲ್ಲಿಸಬೇಕಿದೆ ಎಂದು ಅವರು ಎಚ್ಚರಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಎಲ್. ವಿಜಯಕುಮಾರ್ ವಿಷಯ ಮಂಡಿಸಿದರು. ಜಿಲ್ಲಾ ಸಂಚಾಲಕ ಆಲಗೂಡು ಚಂದ್ರಶೇಖರ್, ಚಾ. ಶಿವಕುಮಾರ್, ಕೆ.ವಿ. ದೇವೇಂದ್ರ, ಶಿವಮೂರ್ತಿ ಶಂಕರಪುರ, ಕಿರಂಗೂರು ಸ್ವಾಮಿ, ನಟರಾಜ್ ಹಾರೋಹಳ್ಳಿ ಇದ್ದರು.