ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಿದ್ಯಾರ್ಥಿಗಳು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದು ಬೆಂಗಳೂರಿನ ಲಿವಿಯಾನ್ ಬಯೋಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ.ಶಿವಶಂಕರ.ಎನ್.ಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದು ಬೆಂಗಳೂರಿನ ಲಿವಿಯಾನ್ ಬಯೋಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ.ಶಿವಶಂಕರ.ಎನ್.ಜಿ ಹೇಳಿದರು.ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಿವಿವಿ ಸಂಘದ ಹಾನಗಲ್ ಶ್ರೀಕುಮಾರೇಶ್ವರ ಕಾಲೇಜ್ ಆಫ್ ಫಾರ್ಮಸಿಯಿಂದ ಆಯೋಜಿಸಿದ್ದ
ಬಿ.ಫಾರ್ಮ್, ಎಂ.ಫಾರ್ಮ್ ಹಾಗೂ ಫಾರ್ಮ-ಡಿ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪದವಿ ಪ್ರದಾನ ಮಾಡಿ ಮಾತನಾಡಿದರು. ಉದ್ಯೋಗಿಯಾಗಿರಲಿ ಅಥವಾ ಉದ್ಯೋಗದಾತರಾಗಿರಲಿ, ಪ್ರತಿಯೊಬ್ಬರಿಗೂ ಸಾಧನೆ ಮಾಡಲು ಸಮಾನ ಅವಕಾಶಗಳಿವೆ. ಕೌಶಲ್ಯ, ಶಿಸ್ತು, ಸಮಯಪಾಲನೆ, ನಿರಂತರ ಅಭ್ಯಾಸ ಹಾಗೂ ಪರಿಶ್ರಮ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಹಣವೊಂದೇ ಜೀವನದ ಮುಖ್ಯ ಗುರಿಯಾಗಬಾರದು. ಜ್ಞಾನ, ತಾಳ್ಮೆ, ತಂಡದ ಕಾರ್ಯಕ್ಷಮತೆ ಹಾಗೂ ಸಮಾಜ ಸೇವಾ ಮನೋಭಾವವೂ ವ್ಯಕ್ತಿಯ ಬೆಳವಣಿಗೆಗೆ ಅಗತ್ಯವಾಗಿದೆ. ಫಾರ್ಮಸಿ ಎಂದರೆ ಕೇವಲ ಮಾತ್ರೆ ತಯಾರಿಸುವುದಲ್ಲ, ಆರೋಗ್ಯವಂತ ಸಮಾಜ ಮತ್ತು ದೇಶ ನಿರ್ಮಾಣದಲ್ಲಿ ಫಾರ್ಮಸಿಸ್ಟ್‌ಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಾನಗಲ್ ಶ್ರೀಕುಮಾರೇಶ್ವರ ಕಾಲೇಜ್ ಆಫ್ ಫಾರ್ಮಸಿಯ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಇಂದು ಜೀವನದ ಅತ್ಯಂತ ಮಹತ್ವದ ದಿನ. ನೀವು ಕೇವಲ ಪದವಿ ಪಡೆಯುತ್ತಿಲ್ಲ; ಸಮಾಜದ ಆರೋಗ್ಯದ ಜವಾಬ್ದಾರಿಯನ್ನೂ ಹೊರುತ್ತಿದ್ದೀರಿ. ಬಿವಿವಿ ಸಂಘವು ಕಳೆದ 100 ವರ್ಷಗಳಿಂದ ಶಿಕ್ಷಣದ ಮೂಲಕ ಸಮಾಜ ಸೇವೆ ಮಾಡುತ್ತಿದೆ ಎಂದರು.ನಮ್ಮ ಫಾರ್ಮಸಿ ಕಾಲೇಜು ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ವರ್ಷ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 153 ರ್‍ಯಾಂಕ್‌ಗಳು, 15ಕ್ಕೂ ಹೆಚ್ಚು ಪೇಟೆಂಟ್‌ಗಳು ಹಾಗೂ 82 ಲಕ್ಷ ಸಂಶೋಧನಾ ಅನುದಾನ ದೊರೆತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ವಿದ್ಯಾರ್ಥಿನಿ ಸೌಮ್ಯ ಜಮಖಂಡಿ 2025-26 ನೇ ಸಾಲಿನಲ್ಲಿ ಎಂ.ಪಾರ್ಮ್ ಫಾರ್ಮಾಸ್ಯುಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಬಾಗಲಕೋಟೆಯಂತಹ ಪ್ರದೇಶದಿಂದಲೂ ಜಾಗತಿಕ ಮಟ್ಟದ ಸಂಶೋಧನೆ ನಡೆಸಬಹುದು ಎಂಬುದನ್ನು ತೋರಿಸಿಕೊಡಬೇಕು. ಬಿವಿವಿ ಸಂಘ ಹಾಗೂ ಕ್ರಿಯಾಶೀಲ, ಕಾಯಕಯೋಗಿ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಭರವಸೆ ನೀಡಿದರು.ಪ್ರಾಚಾರ್ಯ ಡಾ.ವೈ.ಶ್ರೀನಿವಾಸ್ ಸ್ವಾಗತಿಸಿದರು. ಡಾ.ಜಯದೇವ ಹಿರೇಮಠ ಹಾಗೂ ಡಾ.ವಿ.ಎಂ.ಚಂದ್ರಶೇಖರ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಡಾ.ಅನಿತಾ ದೇಸಾಯಿ ಹಾಗೂ ಡಾ.ವಿ.ಎಂ.ಕಿತ್ತೂರ ಅತಿಥಿಗಳನ್ನು ಪರಿಚಯಿಸಿದರು. ಡಾ.ಶರಣಬಸವ ಬಿರಾದಾರ ಪ್ರಮಾಣ ವಚನ ಬೋಧಿಸಿದರು. ಡಾ.ಪೂರ್ಣಿಮಾ ಹೊಸಮಠ ವಂದಿಸಿದರು. ಪ್ರಸಾದ ಮಳಗಿ, ಸುಶ್ಮಿತಾ ಮೂಡಲಗಿ, ಸಂಜಯ ಹಾವರಗಿ ಹಾಗೂ ಡಾ. ಅಭಿರಾಮಿಪಾನೀಕರ ಕಾರ್ಯಕ್ರಮ ನಿರೂಪಿಸಿದರು. ಡಾ.ಲಕ್ಷ್ಮಣ ವಿಜಾಪುರ, ಡಾ.ಸುಷ್ಮಾ ಅವಟಿ, ಡಾ.ಶ್ರೀನಿವಾಸ ದೇಶಪಾಂಡೆ ಹಾಗೂ ಡಾ.ಮಲ್ಲಪ್ಪ ಶಲವಾಡಿ ಪದವೀಧರರಿಗೆ ಪ್ರಮಾಣಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
----ಕೋಟ್‌ಮುಂದೆ ಎಐ ಬರಬಹುದು, ರೋಬೋಟ್‌ಗಳು ಬರಬಹುದು, ಆದರೆ ರೋಗಿಗೆ ಧೈರ್ಯ ತುಂಬುವ ಮಾನವೀಯ ಸ್ಪರ್ಶ ನೀಡುವುದನ್ನು ಯಾವುದೂ ಬದಲಿಸಲಾರದು. ಕರ್ನಾಟಕ ನಿಮ್ಮನ್ನು ನಂಬಿದೆ, ಭಾರತ ನಿಮ್ಮನ್ನು ಎದುರು ನೋಡುತ್ತಿದೆ. ವಿಶ್ವ ಫಾರ್ಮಸಿ ಕ್ಷೇತ್ರದ ನಾಯಕರಾಗಿ ಬೆಳೆಯಿರಿ.ಡಾ.ಎಸ್.ಎಂ.ಶಿವಪ್ರಸಾದ್, ನಿರ್ದೇಶಕ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ