ಧಾರವಾಡ: ಪಾಟೀಲ ಎಜುಕೇಶನ್ ಟ್ರಸ್ಟ್ ವತಿಯಿಂದ ಇಲ್ಲಿಯ ದಾಸನಕೊಪ್ಪ ವೃತ್ತದ ಬಳಿ ಸ್ಥಾಪಿತ ಪಾಟೀಲ ಗುರುಕುಲ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನ್ನು ಭಾನುವಾರ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.

ಪ್ರಸ್ತುತ ಎಐ ಯುಗದಲ್ಲಿ ಶಿಕ್ಷಣ ಕ್ಷೇತ್ರ ಅಪಾರವಾಗಿ ಬೆಳೆಯುತ್ತಿದ್ದರೂ ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುವುದು ಅತ್ಯಗತ್ಯ. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಸಮಾಜ ನಿರ್ಮಾಣದ ಅಡಿಪಾಯ. ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಿದಾಗ ಮಾತ್ರ ರಾಷ್ಟ್ರಕ್ಕೆ ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯ ಎಂದು ಹೊರಟ್ಟಿ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ತುಳಸೀಗೇರಿ ಪೂರ್ಣಾನಂದ ಮಠದ ರಾಮಾನಂದ ಸ್ವಾಮೀಜಿ, ಭಾರತೀಯ ಸಂಸ್ಕೃತಿ ಮತ್ತು ಗುರುಕುಲ ಪರಂಪರೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಿವೆ. ನೈತಿಕತೆ, ಸಂಸ್ಕಾರ ಮತ್ತು ಶಿಕ್ಷಣದ ಸಮನ್ವಯದಿಂದ ಮಾತ್ರ ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಾಟೀಲ ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಪಾಟೀಲ, ಸಾರ್ಥಕ ಭವಿಷ್ಯಕ್ಕಾಗಿ ನಿಸ್ವಾರ್ಥ ಸೇವೆ ಎಂಬ ಧ್ಯೇಯದೊಂದಿಗೆ ಸಂಸ್ಥೆ ಶುರುವಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಶಿಕ್ಷಣವಲ್ಲದೆ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡುವುದು ಸಂಸ್ಥೆಯ ಪ್ರಮುಖ ಗುರಿ ಎಂದರು.

ರಾಜ್ಯ ಮಾಧ್ಯಮಿಕ ಶಿಕ್ಷಣ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ, ಉಪನ್ಯಾಸಕ ಶಿವಪೂಜಿ ಕೋಟಿ ಮಾತನಾಡಿದರು. ಉಪನ್ಯಾಸಕರಾದ ಈಶ್ವರ ಬೆಟದೂರು, ಶರಣು ಡೆಂಗಿಮಠ, ಡಾ. ವಿಜಯಕುಮಾರ್ ಎಂ.ವಿ, ಮಾನಪ್ಪ ದಾಸರ ಇದ್ದರು.


ಹೊರಟ್ಟಿ ಶ್ಲಾಘನೆ

ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ದೀರ್ಘ ಅನುಭವ ಮತ್ತು ಸೇವಾ ಮನೋಭಾವ ಹೊಂದಿರುವ ಎನ್.ಎಂ. ಪಾಟೀಲ ನೇತೃತ್ವದಲ್ಲಿ ಪಾಟೀಲ ಗುರುಕುಲ ವಿದ್ಯಾರ್ಥಿಗಳ ಕನಸುಗಳಿಗೆ ಭದ್ರ ಬುನಾದಿ ಹಾಕುವ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.