ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ನಮ್ಮ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರ ನಡೆ ಕಾನೂನು ಬದ್ಧವಾಗಿದೆ. ಡಿಸಿಯವರು ಹಕ್ಕುಚ್ಯುತಿ ಮಾಡಿಲ್ಲ ಎಂಬುದು ನಮ್ಮ ವಾದವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ನಮ್ಮ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರ ನಡೆ ಕಾನೂನು ಬದ್ಧವಾಗಿದೆ. ಡಿಸಿಯವರು ಹಕ್ಕುಚ್ಯುತಿ ಮಾಡಿಲ್ಲ ಎಂಬುದು ನಮ್ಮ ವಾದವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರ ವಿರುದ್ಧ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ದೂರು ನೀಡಿದ್ದಾರಷ್ಟೇ, ಆದರೆ ಇನ್ನುವರೆಗೆ ಯಾವುದೇ ನೋಟಿಸ್‌ ಬಂದಿಲ್ಲ. ಕಮಿಟಿ ರಚಿಸಿಲ್ಲ. ನೋಟಿಸ್‌ ಬಂದ ಮೇಲೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಈ ವಿಷಯದಲ್ಲಿ ರಾಜ್ಯದ ಎಲ್ಲ ಸಂಸದರು ಧ್ವನಿ ಎತ್ತಬೇಕೆಂದು ತಿಳಿಸಿದರು.ಬೆಳಗಾವಿ ವಿಭಜನೆ ಚರ್ಚೆ:

ಶೀಘ್ರದಲ್ಲೇ ಬೆಳಗಾವಿ ಜಿಲ್ಲಾ ವಿಭಜನೆ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಚಿಕ್ಕೋಡಿಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಬೆಂಗಳೂರಿನಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದರು.

ಫ್ಲೈಓವರ್‌ ನಿರ್ಮಾಣ ವಿಚಾರ:

ಬೆಳಗಾವಿಯಲ್ಲಿ ಬಹುನಿರೀಕ್ಷಿತ ಫ್ಲೈಓವರ್ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸಚಿವ ಸಂಪುಟ ಯೋಜನೆಗೆ ಅನುಮೋದನೆ ನೀಡಿದ್ದು, ಇದು ರಾಷ್ಟ್ರೀಯ ಹೆದ್ದಾರಿ-48 ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ ಸುಮಾರು 2.03 ಕಿ.ಮೀ ಉದ್ದವಿರಲಿದೆ. ಈ ಯೋಜನೆಗೆ ಎಲ್ಲಿಯೂ ಭೂಸ್ವಾಧೀನ ಮಾಡುವ ಅವಶ್ಯಕತೆ ಇಲ್ಲ. ಈ ಯೋಜನೆಯನ್ನು ಬೆಳಗಾವಿ ಮೂರನೇ ಗೇಟ್‌ವರೆಗೆ ವಿಸ್ತರಣೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಅಲ್ಲದೇ, ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.