ಸಂಸದರು ಕುಂಟುನೆಪ ಹೇಳದೆ ಮಹದಾಯಿ ಯೋಜನೆ ಜಾರಿಗೆ ಶ್ರಮಿಸಲಿ

| Published : Mar 09 2024, 01:33 AM IST

ಸಂಸದರು ಕುಂಟುನೆಪ ಹೇಳದೆ ಮಹದಾಯಿ ಯೋಜನೆ ಜಾರಿಗೆ ಶ್ರಮಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಈ ಭಾಗದ ಸಂಸದರು ಪ್ರಧಾನಿಗಳ ಮೇಲೆ ಒತ್ತಡ ತಂದು, ಯೋಜನೆ ಜಾರಿಗೆ ಮುಂದಾಗಬೇಕಿದೆ

ಹುಬ್ಬಳ್ಳಿ: ಮಹದಾಯಿ ಯೋಜನೆಗೆ ರಾಜ್ಯ ಸರ್ಕಾರ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಕುಂಟು ನೆಪ ಹೇಳದೆ ಯೋಜನೆ ಜಾರಿಗೆ ಪ್ರಧಾನಿಯವರ ಬಳಿ ಒತ್ತಡ ಹೇರುವ ಕೆಲಸವನ್ನು ಸಂಸದ ಪ್ರಹ್ಲಾದ ಜೋಶಿ ಮಾಡಬೇಕು ಎಂದು ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಮಹದಾಯಿ ಯೋಜನೆ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ. ಈಗಾಗಲೇ ಮಹದಾಯಿ ನ್ಯಾಯಾಧೀಕರಣ ಆದೇಶವಾಗಿದೆ‌. ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಈ ಭಾಗದ ಸಂಸದರು ಪ್ರಧಾನಿಗಳ ಮೇಲೆ ಒತ್ತಡ ತಂದು, ಯೋಜನೆ ಜಾರಿಗೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ,ರಾಜ್ಯ ಸರ್ಕಾರ ಈವರೆಗೆ ಕೇಂದ್ರಕ್ಕೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಕಳೆದ ಜ.31ರಂದು ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಆದರೆ, ಗೋವಾ ಜನತೆ ಟೈಗರ್ ಕಾರಿಡಾರ್ ಬರುತ್ತದೆ ಯೋಜನೆಗೆ ಆದೇಶ ನೀಡಬಾರದು ಎಂದು ಕ್ಯಾತೆ ತೆಗೆದಿದೆ ಎಂದರು.

ನರೇಗಾ ಯೋಜನೆಯ ಅಡಿ 2023 ಸೆಪ್ಟೆಂಬರ್‌ನಿಂದ ₹702 ಕೋಟಿ ಹಣ ನರೇಗಾ ಕಾರ್ಮಿಕರಿಗೆ ವೇತನ ನೀಡಿಲ್ಲ. ಇದರಿಂದ ಜನ ಗುಳೆ ಹೋಗುತ್ತಿದ್ದಾರೆ. ಈ ಹಣ ಬಿಡುಗಡೆಗೆ ಕೇಂದ್ರದ ನಾಯಕರು ಶ್ರಮಿಸಬೇಕು ಎಂದರು.

ರೈತರ ಪ್ರತಿಭಟನೆ: ಕಳೆದ ಎರಡು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಹಾಯ ಕಲ್ಪಿಸಬೇಕು. ನರೇಗಾ ಅಡಿ ನೂರು ದಿನಗಳ ಬದಲು 200 ದಿನ ಕೆಲಸ ನೀಡಲು ಆಗ್ರಹಿಸುತ್ತಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ವರದಿ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ತಿಳಿಸಿದರು.

ಟಿಕೆಟ್‌ ದೊರೆಯುವ ಭರವಸೆ: ಲೋಕಸಭಾ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದೇನೆ. ನಾಯಕರು ಸಮ್ಮತಿ ಸೂಚಿಸಿದ್ದಾರೆ. ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ. ಟಿಕೆಟ್ ದೊರೆಯುವ ಭರವಸೆ ಇದೆ. ಎಲ್ಲ ಸಮಾಜದವರು ನನಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಪ್ರಕಾಶಗೌಡ ಪಾಟೀಲ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ಅನ್ವರ ಮುಧೋಳ ಸೇರಿದಂತೆ ಹಲವರಿದ್ದರು.