ಮೂಡಲಗಿ ಸಹಕಾರಿ ಹಬ್‌ ಆಗಿ ಬೆಳೆಯಲಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

| Published : Jan 24 2024, 02:03 AM IST

ಮೂಡಲಗಿ ಸಹಕಾರಿ ಹಬ್‌ ಆಗಿ ಬೆಳೆಯಲಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಮಹೋತ್ಸವದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮೂಡಲಗಿ ಸಹಕಾರ ಕ್ಷೇತ್ರದ ಬೆಳವಣಿಗೆಯಾಗಲು ಫಲವತ್ತಾದ ಕೇಂದ್ರ ಸ್ಥಾನವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಮೂಡಲಗಿ ಸಹಕಾರ ಕ್ಷೇತ್ರದ ಬೆಳವಣಿಗೆಯಾಗಲು ಫಲವತ್ತಾದ ಕೇಂದ್ರ ಸ್ಥಾನವಾಗಿದೆ. ಇದರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಒಂದು ಆರ್ಥಿಕ ಶಕ್ತಿ ಕೇಂದ್ರವಾಗಿ ಬೆಳೆಯುವ ಎಲ್ಲ ಸಾಮರ್ಥ್ಯ ಹೊಂದಿದ್ದು, ಮೂಡಲಗಿಯು ಸಹಕಾರಿಯ ಹಬ್‌ ಆಗಿ ಬೆಳೆಯಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶುಭ ಹಾರೈಸಿದರು.

ಮೂಡಲಗಿಯಲ್ಲಿ ಸೋಮವಾರ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ 25ನೇ ವರ್ಷದ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಬೆಳೆದು ಆ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿ ಸಂಸ್ಥೆಗಳು ಮುಂದೆ ಬರಬೇಕು ಎಂದು ಆಶಿಸಿದರು.

ಸಹಕಾರಿ ಕ್ಷೇತ್ರವು 1905 ರಲ್ಲಿ ಪ್ರಾರಂಭವಾಗಿದ್ದು ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ಕರ್ನಾಟಕವು ಭದ್ರ ಬುನಾದಿಯಾಗಿದ್ದು, ರಾಜ್ಯದ ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅವರ ಸ್ಮರಣೆ ಮುಖ್ಯ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುವ ಸಲುವಾಗಿ ಕೇಂದ್ರವು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದೆ ಎಂದ ಅವರು, ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ವಿವಿ ಸ್ಥಾಪಿಸಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಸಹಕಾರಿ ತತ್ವದಡಿ ಹುಟ್ಟಿಕೊಂಡ ಕುರುಹಿನಶೆಟ್ಟಿ ಸೊಸೈಟಿಯು ತನ್ನ ಶೇರುದಾರರ ಆರ್ಥಿಕ ಸಬಲೀಕರಣ ಮಾಡಲು ಎಲ್ಲ ತರಹದ ಸಾಲ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಮೂಡಲಗಿಯ ಸಹಕಾರಿ ಸೊಸೈಟಿಗಳು ರಿಯಲ್ ಎಸ್ಟೇಟ್ ಉದ್ಯೋಗದಲ್ಲಿ ಹಣ ತೊಡಗಿಸದೇ ಕೇವಲ ಸಾಲ ಮಾತ್ರ ನೀಡಿ ಪ್ರಗತಿ ಪಥದತ್ತ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಶ್ರೀ ಶಿವಶಂಕರ ಶ್ರೀಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಶ್ರೀಗಳು, ಸದಲಗಾ ಶ್ರೀ ಶಿವಾನಂದ ಗೀತಾಶ್ರಮದ ಶ್ರದ್ಧಾನಂದ ಶ್ರೀಗಳು, ಅಸುಂಡಿಯ ಡಾ.ಶಿವಶರಣೆ ನೀಲಮ್ಮ ತಾಯಿಯವರು ಮಾತನಾಡಿ, ಕುರುಹಿನಶೆಟ್ಟಿ ಸೊಸೈಟಿಯ ಸಾಧನೆಯನ್ನು ಶ್ಲಾಘಿಸಿ ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯಲ್ಲಿ ಎಂದರು.

ಸೊಸೈಟಿ ಅಧ್ಯಕ್ಷ ಬಸವಣ್ಣಿ ಚಿ.ಮುಗಳಖೋಡ ಮಾತನಾಡಿ, ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ, ಸಿಬ್ಬಂದಿ ಪ್ರಾಮಾಣಿಕ ಸೇವೆ ಮತ್ತು ಶೇರುದಾರರು, ಗ್ರಾಹಕರ ಹಾಗೂ ಎಲ್ಲರ ಸಹಾಯ ಸಹಕಾರದಿಂದ ಸೊಸೈಟಿ ಕಡಿಮೆ ಅವಧಿಯಲ್ಲಿ 14 ಶಾಖೆಗಳನ್ನು ಹೊಂದಿ ಪ್ರಗತಿಪಥದತ ಮುನ್ನಡೆಯುತ್ತಿದೆ ಎಂದು ಹೇಳಿದರು.

ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬೈಲಹೊಂಗಲ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು.

ಸಮಾರಂಭದಲ್ಲಿ ಪೂಜ್ಯರು ಮತ್ತು ಸಂಸದರು, ಅತಿಥಿಗಳು ಸೊಸೈಟಿ ಬೆಳ್ಳಿ ಸಂಭ್ರಮದ ನೆನಪಿಗೆ "ಕುರುಹುಪಥ " ಸ್ಮರಣ ಸಂಚಿಕೆಯ ಬಿಡುಗಡೆಗೊಳಿಸಿದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕ ಸುಭಾಸ ಸೋನವಾಲಕರ, ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಹೊಸಮಠ, ಕೊಗನಳ್ಳಿಯ ದತ್ತಗುರು ಸಹಕಾರಿ ಅಧ್ಯಕ್ಷ ಸಚಿನ ಖೋತ, ಕುರುಹಿನಶೆಟ್ಟಿ ಸೊಸೈಟಿಯ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಸುಭಾಸ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವಾ ಬೊರಗಲ್, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ ಮತ್ತಿತರರು ಇದ್ದರು.

ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ವರದಿ ವಾಚಿಸಿದರು. ಸಾಹಿತಿ ಬಾಲಶೇಖರ ಬಂದಿ ಸ್ವಾಗತಿಸಿದರು, ಶ್ರುತಿ ಗೋಕಾಕ ನಿರೂಪಿಸಿದರು, ಪ್ರಮೋದ ಯಲಬುರ್ಗಮಠ ವಂದಿಸಿದರು.