ಸಾರಾಂಶ
ಹುಬ್ಬಳ್ಳಿ:
ಹುಬ್ಬಳ್ಳಿ ಶಹರದಲ್ಲಿ ಯಾವುದೇ ಮನೆ ಮತ್ತು ಕುಟುಂಬದ ಸದಸ್ಯರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮಗ್ರವಾಗಿ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಹರ ತಹಸೀಲ್ದಾರ್ ಮಹೇಶ್ ಗಸ್ತಿ ಹೇಳಿದರು.ಇಲ್ಲಿಯ ಘಂಟಿಕೇರಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 5ರಲ್ಲಿ ಹುಬ್ಬಳ್ಳಿ ಶಹರ ವಲಯದಲ್ಲಿ ಸಮೀಕ್ಷಾ ಸಾಮಗ್ರಿಗಳ ವಿತರಣಾ ಹಾಗೂ ಸಮೀಕ್ಷೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಪಡ್ನೇಶಿ ಮಾತನಾಡಿ, ಇದು ಸರ್ಕಾರದ ಮಹತ್ವಾಕಾಂಕ್ಷೆಯ ಸಮೀಕ್ಷೆಯಾಗಿದ್ದು, ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಮಗ್ರ ಮತ್ತು ಪಾರದರ್ಶಕ ಸಮೀಕ್ಷೆಗೆ ಒತ್ತು ನೀಡಬೇಕೆಂದರು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನ ಕ್ಯಾಸನೂರ ಮಾತನಾಡಿ, ಪ್ರತಿ ಮನೆಗೂ ಭೇಟಿ ನೀಡಿ ಆಯೋಗದ ಸೂಚನೆಯಂತೆ 60 ಪ್ರಶ್ನೆಗಳಿಗೆ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಯಶಸ್ವಿಗೊಳಿಸುವಂತೆ ತಿಳಿಸಿದರು.
ಈ ವೇಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಶಹರ ವಲಯದ ಅಧ್ಯಕ್ಷ ಮಂಜುನಾಥ ಜಂಗಳಿ, ಹಿರಿಯ ಅಧಿಕಾರಿಗಳು, ಇಸಿಒ, ಬಿಆರ್‌ಪಿ, ಸಿಆರ್‌ಪಿ, ಬಿಐಇಆರ್‌ಟಿ ಹಾಗೂ ಬಿಇಒ ಕಚೇರಿ ಸಿಬ್ಬಂದಿ ಇದ್ದರು.ಕೆ.ಎಂ. ಗೆದಗೇರಿ ನಿರೂಪಿಸಿದರು. ಬಿ.ವೈ. ಅಂಬಿಗೇರ ವಂದಿಸಿದರು.
ಬೆಳಗ್ಗೆ ತಾಂತ್ರಿಕ ದೋಷ, ಮಧ್ಯಾಹ್ನ ಸಮೀಕ್ಷೆ ಆರಂಭರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಗರದಲ್ಲಿ ಸೋಮವಾರ ಕೆಲ ತಾಂತ್ರಿಕ ಅಡೆತಡೆಗಳು ಎದುರಾಗಿದ್ದವು. ತೊಂದರೆ ನಿವಾರಿಸಿ ಮಧ್ಯಾಹ್ನದ ವೇಳೆಗೆ ಸಮೀಕ್ಷಾ ಕಾರ್ಯ ಆರಂಭಿಸಲಾಗಿದೆ.ಬೆಳಗಿನ ವೇಳೆ ಸಮೀಕ್ಷಾ ಕಾರ್ಯ ಕೈಗೊಂಡಾಗ ಸರ್ವರ್ ಸಮಸ್ಯೆ ಸೇರಿ ವಿವಿಧ ತೊಂದರೆ ಎದುರಾಗಿದ್ದವು. ಮಧ್ಯಾಹ್ನದ ವೇಳೆಗೆ ಪರಿಣಿತರು ಸಮಸ್ಯೆ ಸರಿಪಡಿಸಿದರು. ಬಳಿಕ ಸಮೀಕ್ಷಾ ಕಾರ್ಯ ಆರಂಭವಾಯಿತು.ಭಾನುವಾರ ಸಿಬ್ಬಂದಿಗೆ ಸಮೀಕ್ಷೆ ಕುರಿತಂತೆ ತರಬೇತಿ ನೀಡಲಾಗಿದೆ. ಅಲ್ಲದೆ, 1864 ಸಿಬ್ಬಂದಿ ನಿಯೋಜಿಸಿ ಒಬ್ಬ ಗಣತಿದಾರನಿಗೆ 150 ಮನೆಗಳ ನಿಗದಿ ಮಾಡಲಾಗಿದೆ. ವಿವಿಧ ಬ್ಲಾಕ್‌ಗಳಾಗಿ ವಿಂಗಡಿಸಿ ಸಮೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಕೆಲ ಗಣತಿದಾರರಿಗೆ ಸಂಜೆ ವರೆಗೂ ತಾಂತ್ರಿಕ ಸಮಸ್ಯೆ ಸರಿಹೋಗಿರಲಿಲ್ಲ. ಸಮೀಕ್ಷೆಯ ವೆಬ್‌ಸೈಟ್ ಲಿಂಕ್ ನೀಡಿದ್ದಾರೆ. ಆ ಲಿಂಕ್ ಕೆಲಹೊತ್ತು ತೆರೆದುಕೊಳ್ಳುತ್ತಿಲ್ಲ. ಹೀಗಾಗಿ, ಸಮೀಕ್ಷೆ ಕಾರ್ಯದಲ್ಲಿ ತೊಂದರೆಯುಂಟಾಗಿತ್ತು ಎಂದು ಮಾಹಿತಿ ನೀಡಿದರು.
ಶಹರ ತಹಸೀಲ್ದಾರ್ ಮಹೇಶ ಗಸ್ತೆ ಈ ಕುರಿತು ಮಾಹಿತಿ ನೀಡಿ, ಬೆಳಗಿನ ವೇಳೆ ತಾಂತ್ರಿಕ ತೊಂದರೆ ಎದುರಾಗಿತ್ತು. ಪುಟ ತೆರೆದುಕೊಳ್ಳದರಿಂದ ಸಮೀಕ್ಷೆಗೆ ಕೆಲಕಾಲ ನಿಂತಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲ ತೊಂದರೆ ಸರಿಪಡಿಸಲಾಗಿದೆ. ಮಂಗಳವಾರದಿಂದ ಪೂರ್ಣಪ್ರಮಾಣದಲ್ಲಿ ಸಮೀಕ್ಷಾ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.ಇನ್ನು ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ 370 ಗಣತಿದಾರರನ್ನು ನೇಮಿಸಲಾಗಿದ್ದು, ಎಲ್ಲರಿಗೂ ಕಿಟ್ ನೀಡಲಾಗಿದೆ. ನಿಗದಿಯಂತೆ ಗಣತಿ ಕಾರ್ಯ ಆರಂಭವಾಗಿದೆ ಎಂದು ತಹಸೀಲ್ದಾರ್ ಜಿ.ಬಿ. ಮಜ್ಜಗಿ ತಿಳಿಸಿದ್ದಾರೆ.