ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಾಚೀನ ಇತಿಹಾಸಕ್ಕೆ ಹೆಸರಾದ ನಮ್ಮ ದೇಶದಲ್ಲಿನ ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ಕೂಡಲಸಂಗಮ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಬೇರೆ ದೇಶದ ಸಾಕಷ್ಟು ಜನ ಅಧ್ಯಯನಕ್ಕಾಗಿ ನಮ್ಮ ಭಾರತಕ್ಕೆ ಬರುತ್ತಾರೆ. ವಿದೇಶಕ್ಕೂ ನಾನು ಸಹ ಹೋಗಿಬಂದಿದ್ದು, ಅಲ್ಲಿ ಕೇವಲ ಉತ್ತಮವಾದ ರಸ್ತೆ, ಉದ್ಯಾನವನವನ್ನು ಮಾತ್ರ ನೋಡಬಹುದೇ ವಿನಃ ಐಹೊಳೆ, ಪಟ್ಟದಕಲ್ಲಿನಂತಹ ಸ್ಮಾರಕರಗಳನ್ನು ನೋಡಲು ಸಿಗುವುದಿಲ್ಲವೆಂದರು.
ವಿಜಯಪುರದಲ್ಲಿ ಗೋಲಗುಂಬಜ ಎಂಬ ಅದ್ಭುತ್‌ವಾದ ಕಟ್ಟಡ ಕಾಣಬಹುದು. ಇಂತಹ ಬೃಹತ್ ಕಟ್ಟಡಗಳನ್ನು ಅಂದಿನ ಕಾಲದಲ್ಲಿ ಸಿಮೆಂಟ್ ಕಬ್ಬಿಣವಿಲ್ಲದೇ ನಿರ್ಮಾಣ ಮಾಡಿದ್ದಾರೆ. ಬಾದಾಮಿ ಗುಹಾಂತರ ದೇವಾಲಯಗಳನ್ನು ಒಂದೇ ಶಿಲೆಯಲ್ಲಿ ಕೆತ್ತನೆ ಮಾಡಿದ್ದಾರೆ. ಇಂತಹ ಕಲೆಯ ಅಧ್ಯಯನಕ್ಕೆ ಲಕ್ಷಾನುಗಟ್ಟಲೆ ಖರ್ಚು ಮಾಡಿಕೊಂಡು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಹಿಂದೆ ನಮ್ಮ ದೇಶವನ್ನು ಆಳಿದವರು ಅವಗಳನ್ನು ಒಡೆದು ಹಾಕಿದ್ದಾರೆ. ಅಂತಹ ಶಿಲ್ಪಗಳನ್ನು ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಸುಂದರ ಸಂಸ್ಕೃತಿ ಹೊಂದಿದ ನಮ್ಮ ದೇಶವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಕೂಡಲಸಂಗಮ ಇನ್ನಷ್ಟು ಅಭಿವೃದ್ಧಿಗೆ ಪ್ರಾಧಿಕಾರದ ಆಯುಕ್ತರೊಂದಿಗೆ ಚರ್ಚಿಸಿ ಇಲ್ಲಿಯ ಪರಿಸರ ಬಳಕೆ ಮಾಡಿಕೊಂಡು ಅಭಿವೃದ್ಧಿ ಪೂರಕವಾದ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಐತಿಹಾಸಿಕ ತಾಣದಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನವನಗರದ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಗುರುಸ್ವಾಮಿ ಹಿರೇಮಠ ಮಾತನಾಡಿ, ಅನೇಕ ಸಾಂಸ್ಕೃತಿಕ, ಕಲಾತ್ಮಕ ಹಾಗೂ ವೈಜ್ಞಾನಿಕ ಕಲೆಗಳು ನಮ್ಮಲ್ಲಿವೆ. ಕೊಪ್ಪಳದ ಕಿನ್ನಾಳ ಎಂಬ ಗ್ರಾಮ ಗೊಂಬೆಗಳಿಗೆ ಜಗಪ್ರಸಿದ್ಧವಾಗಿದೆ. ಅಲ್ಲಿಗೆ ರಷ್ಯಾ ದೇಶದ ಗಂಡು ಮಕ್ಕಳು ಈ ಕಲೆಯ ಅದ್ಯಯನಕ್ಕೆ ಬರುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲದೇ ನಮ್ಮಲ್ಲಿರುವ ಆಹಾರ ಪದ್ಧತಿ, ಆರೋಗ್ಯ ಪದ್ಧತಿಯನ್ನು ಕಲಿಯಲು ಬರುತ್ತಿದ್ದಾರೆ. ವಿದೇಶಿಗರು ಈ ದೇಶಕ್ಕೆ ಬಂದು ಅರೆ ಬೆತ್ತಲೆಯಾಗಿ ಅಲೆದಾಡುತ್ತಾರೆ. ಕಾರಣ ಇಲ್ಲಿನ ಬಿಸಿಲಿನ ಕಣಗಳು ಚರ್ಮಕ್ಕೆ ತಾಕಿ ಚರ್ಮ ರೋಗ ನಿವಾರಣೆ ಮಾಡಿಕೊಳ್ಳುತ್ತಾರೆ. ದೇಶಕ್ಕೆ ಆಗಮಿಸಿದ ಪ್ರವಾಸಿಗರಿಗೆ ಸುರಕ್ಷತೆ, ಸ್ವಚ್ಛತೆ ಕೊಡುವ ಕೆಲಸವಾಗಬೇಕು ಎಂದರು.ಈ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ ರಾಂಪೂರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಗೋಪಾಲ ಹಿತ್ತಲಮನಿ, ಪಂಚಾಯತ ಅಭಿವೃದ್ದಿ ಅಧಿಕಾರಿ ದೀಪಾ ಬೆನಕೊಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
--ಬಾಕ್ಸ್
ಪ್ರವಾಸಿ ಮಾರ್ಗದರ್ಶಿ, ಪ್ರವಾಸಿ ಮಿತ್ರರಿಗೆ ಸನ್ಮಾನಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರವಾಸಿ ಮಾರ್ಗದರ್ಶಿಗಳಾದ ಪ್ರಸನ್ನ ಮುಗಳಿ, ಮುನೀರಾಬಾನು ಫಾರೂಕಿ ಹಾಗೂ ಪ್ರವಾಸಿ ಮಿತ್ರರಾದ ಬಿ.ಎಚ್.ಚಂದ್ರಗಿರಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.