ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಿ: ಬಸವರಾಜ್

| Published : Jun 23 2024, 02:15 AM IST / Updated: Jun 23 2024, 10:31 AM IST

ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಿ: ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ತಾಪಂ ಸಭಾಂಗಣದಲ್ಲಿ ಇತ್ತೀಚಿಗೆ ಆಡಳಿತಾಧಿಕಾರಿ ಬಸವರಾಜ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು

 ಸಿದ್ದಾಪುರ :  ತಾಲೂಕಿಲ್ಲಿ ಡೆಂಘೀ ಆವರಿಸುತ್ತಿದ್ದು, ಆರೋಗ್ಯ ಇಲಾಖೆ ಮಾತ್ರವಲ್ಲದೇ ಎಲ್ಲ ಇಲಾಖೆ ಅಧಿಕಾರಿಗಳು ಜಾಗೃತರಾಗಬೇಕಾಗಿದೆ. ಯಾರೂ ನಿರ್ಲಕ್ಷಿಸಬಾರದು. ಮುಖ್ಯವಾಗಿ ಶಾಲೆ, ದೇವಸ್ಥಾನ, ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕುರಿತು ಹೆಚ್ಚು ಗಮನ ನೀಡಬೇಕೆಂದು ತಾಪಂ ಆಡಳಿತಾಧಿಕಾರಿ ಬಸವರಾಜ್ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯ ಚರಂಡಿಗಳಲ್ಲಿ ಕೆಸರು ನೀರು ನಿಲ್ಲದಂತೆ ಹಾಗೂ ಸ್ವಚ್ಛತೆ ಕುರಿತು ಗಮನ ನೀಡುವಂತೆ ತಾಪಂ ಇಒ ಅವರು ಸೂಚನೆ ನೀಡಬೇಕು ಎಂದರು.

ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ೪ ಜನರಿಗೆ ಡೆಂಘೀ ದೃಢಪಟ್ಟಿದೆ. ಈ ಕುರಿತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ವಹಿಸುವಂತೆ ಸೂಚನೆ ನೀಡಲಾಗಿದೆ. ಮಳೆ ಪ್ರಾರಂಭವಾಗಿದ್ದರಿಂದ ಕೆಎಫ್‌ಡಿ ನಿಯಂತ್ರಣಕ್ಕೆ ಬಂದಿದೆ ಎಂದರು.

ಬಿಇಒ ಎಂ.ಎಚ್. ನಾಯ್ಕ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಈಗಾಗಲೇ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಶೇ. ೭೬ರಷ್ಟು ಪಠ್ಯಪುಸ್ತಕಗಳನ್ನು ಈಗಾಗಲೇ ಮಕ್ಕಳಿಗೆ ವಿತರಿಸಲಾಗಿದೆ. ೪ರಿಂದ ೯ನೇ ತರಗತಿವರೆಗಿನ ಚಟುವಟಿಕೆ ಪುಸ್ತಕಗಳು ಬಂದಿಲ್ಲ ಎಂದರು.

ತೋಟಗಾರಿಕಾ ಅಧಿಕಾರಿ ಅರುಣ ಜಿ.ಎಚ್. ಮಾತನಾಡಿ, ತಾಲೂಕಿನ ಹಲವೆಡೆ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಅಡಕೆ ಬೆಳೆಗಾರರು ಮುಂಜಾಗ್ರತೆ ವಹಿಸಿ ರೋಗ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಕೃಷಿ, ಬಿಸಿಎಂ.ಸಮಾಜಕಲ್ಯಾಣ, ಸಿಡಿಪಿಒ, ಪಪಂ, ಜಿಪಂ, ಕಂದಾಯ ಮತ್ತಿತರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ದೇವರಾಜ್ ಉಪಸ್ಥಿತರಿದ್ದರು.