ಸಾರಾಂಶ
ಹಳಿಯಾಳ: ಪ್ರಧಾನಿಯವರು ಜಾತಿ- ಜಾತಿ, ಧರ್ಮ- ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟತನವನ್ನು ಕೈಬಿಟ್ಟು ಹತ್ತು ವರ್ಷಗಳ ಸಾಧನೆಯನ್ನು ಮೊದಲು ತಿಳಿಸಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ ಆಗ್ರಹಿಸಿದರು.ಮಂಗಳವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಸಮಾವೇಶ ಮತ್ತು ಗ್ಯಾರಂಟಿ ಕಾರ್ಡ್‌ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ದೇಶದ ಯುವಶಕ್ತಿಯನ್ನು ಸಬಲೀಕರಣಗೊಳಿಸುವ ಕಾರ್ಯವನ್ನು ಆರಂಭಿಸಿದ್ದೆ ಕಾಂಗ್ರೆಸ್ ಪಕ್ಷ. ಯುವ ಮತದಾರರಿಗೆ ಮತದಾನದ ಹಕ್ಕನ್ನು ಕೊಟ್ಟು ಅವರನ್ನು ಮುಖ್ಯವಾಹಿನಿಗೆ ಕಾಂಗ್ರೆಸ್ ತಂದಿದೆ ಎಂದರು.ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ ಬಿಜೆಪಿಯವರೇ ಇಂದು ಗ್ಯಾರಂಟಿಯ ಮೊದಲ ಫಲಾನುಭವಿಯಾಗಿ ಲಾಭವನ್ನು ಪಡೆದು, ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಆರಂಭಿಸಿದ್ದಾರೆ ಎಂದರು. ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ ಮಾತನಾಡಿ, ಹತ್ತು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಪ್ರತಿವರ್ಷ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಯನ್ನು ಮಾಡುವ ಭರವಸೆ ನೀಡಿ ವಂಚಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಿಜೆಪಿ ಕೇವಲ ಜನರನ್ನು ಮತೀಯವಾಗಿ ಕೆರಳಿಸುತ್ತಿದೆ ಎಂದರು.ಕಾಂಗ್ರೆಸ್ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ಇಷ್ಟೊಂದು ಸುಳ್ಳು ಹೇಳುವ ಹಾಗೂ ದ್ವೇಷ ಭಾಷಣವನ್ನು ಮಾಡುವ ಪ್ರಧಾನಿಯನ್ನು ದೇಶವು ಕಂಡಿದ್ದು ಇದೇ ಮೊದಲು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸತ್ಯಜಿತ ಗಿರಿ, ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ ಮಾತನಾಡಿದರು.ಫಯಾಜ ಶೇಖ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸರಪರಾಜ್, ರೋಹನ್ ಬೃಗಾಂಜಾ, ಇಬ್ರಾಹಿಂ ಮುಲ್ಲಾ, ಸಿಕಂದರ್ ಮುಜಾವರ ಹಾಗೂ ಇತರರು ಇದ್ದರು.