ರಾಮನ ಹೆಸರು ನಮ್ಮ ಉಸಿರಾಗಲಿ: ಹೇಮಾವತಿ ವೀ. ಹೆಗ್ಗಡೆ

| Published : Jan 23 2024, 01:46 AM IST

ಸಾರಾಂಶ

ಧರ್ಮಸ್ಥಳದಲ್ಲಿ ಸೋಮವಾರ ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣ ನಡೆಯಿತು. ಹೇಮಾವತಿ ವೀ. ಹೆಗ್ಗಡೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಎಲ್ಲರೂ ರಾಮರಾಗಲು ಅಸಾಧ್ಯ. ಆದರೆ ರಾಮನ ಆದರ್ಶ ಗುಣಗಳನ್ನಾದರೂ ಪಾಲಿಸಿ ರಾಮರಾಜ್ಯದ ಕನಸು ನನಸಾಗಬೇಕು ಎಂದು ಹೇಮಾವತಿ ವೀ. ಹೆಗ್ಗಡೆ ಹೇಳಿದರು.ಧರ್ಮಸ್ಥಳದಲ್ಲಿ ಸೋಮವಾರ ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಮನನ್ನು ಹಲವರು ದೇವರಾಗಿ ಆರಾಧಿಸಿದರೆ ಅನೇಕ ಮಂದಿ ಆತನ ಆದರ್ಶ, ಮಾನವೀಯ ಗುಣಗಳಿಗಾಗಿ ಗೌರವಿಸಿ ಅನುಸರಿಸುತ್ತಾರೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಅದು ಧರ್ಮಸ್ಥಳದಂತೆ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಬೆಳೆಯಲಿದೆ, ಬೆಳಗಲಿದೆ. ಅಯೋಧ್ಯೆಯೂ ಹಲವು ಮಂದಿ ತೀರ್ಥಂಕರರ ಜನ್ಮಸ್ಥಳವಾಗಿದ್ದು, ಜೈನರಿಗೂ ಪವಿತ್ರ ತೀರ್ಥಕ್ಷೇತ್ರವಾಗಿದೆ ಎಂದರು.ಸಾಹಿತಿಗಳು, ಕವಿಗಳು, ರಾಮಾಯಣ ಗ್ರಂಥ ರಚನೆ ಮೂಲಕ ಪದ್ಯ, ನಾಟಕ, ಹರಿಕಥೆ, ಯಕ್ಷಗಾನ ಮೂಲಕ ರಾಮನ ಜೀವನ-ಸಾಧನೆ ಚಿತ್ರಿಸಿದ್ದಾರೆ. ವೈವಿಧ್ಯಮಯ ರಾಮಾಯಣ ಕೃತಿಗಳು ಪ್ರಕಟವಾಗಿವೆ. ಟಿ.ವಿ.ಯಲ್ಲಿ ರಮಾನಂದ ಸಾಗರರ ನೇತೃತ್ವದಲ್ಲಿ ಪ್ರಸಾರವಾದ ರಾಮಾಯಣ ಕೋಟ್ಯಾಂತರ ಜನರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಮಾನಸಿಕ ಸ್ಥಿರತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ರಾಮ ಕೋಟ್ಯಾಂತರ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ದೃಢಸಂಕಲ್ಪ ಹಾಗೂ ಲಕ್ಷಾಂತರ ಭಕ್ತರ ಕಠಿಣ ವ್ರತ-ನಿಯಮಗಳ ಪಾಲನೆ, ಶ್ರದ್ಧಾಭಕ್ತಿಯಿಂದ ರಾಮಮಂದಿರದ ಕನಸು ನನಸಾಗಿದೆ. ಸೇವೆ ಮಾಡುವುದಕ್ಕಿಂತಲೂ ಸೇವೆ ಮಾಡಬೇಕೆನ್ನುವ ಹಂಬಲ ಮುಖ್ಯವಾಗಿದೆ ಎಂದ ಹೇಮಾವತಿ ಹೆಗ್ಗಡೆ, ರಾಮನಾಮತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದ್ದರು.

ಬೆಳ್ತಂಗಡಿ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಸಾಮೂಹಿಕ ಭಜನೆ ಹಾಗೂ ರಾಮನಾಮತಾರಕ ಮಂತ್ರ ಪಠಿಸಲಾಯಿತು.

ಇದೇ ಸಂದರ್ಭ ಅಯೋಧ್ಯೆಯ ರಾಮಜನ್ಮಭೂಮಿಯ ಕರಸೇವೆಯಲ್ಲಿ ಭಾಗಿಯಾದ ಕೆಲವರನ್ನು ಸನ್ಮಾನಿಸಲಾಯಿತು.