ಸಾರಾಂಶ
ಸಾಣೇಹಳ್ಳಿ ಗುರುಬಸವ ಮಹಾಮನೆಯಲ್ಲಿ ಪ್ರತಿತಿಂಗಳ ಇಷ್ಟಲಿಂಗದೀಕ್ಷೆ ಸಂಸ್ಕಾರವನ್ನು ಪಂಡಿತಾರಾಧ್ಯ ಸ್ವಾಮೀಜಿ ನೀಡಿದರು.
ಹೊಸದುರ್ಗ: ಧರ್ಮ ದಯಾಮೂಲವಾಗಿರಬೇಕೇ ಹೊರತು ಭಯಮೂಲವಾಗಬಾರದು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿತಿಂಗಳ ಇಷ್ಟಲಿಂಗದೀಕ್ಷೆ ಸಂಸ್ಕಾರದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಅರಿವು, ಆಚಾರ, ನಡೆ-ನುಡಿ ಒಂದಾಗಿಸಿಕೊಂಡಿರುವ ಅಂದಾಚಾರ ಮೂಡನಂಬಿಕೆ ಕಂದಾಚಾರಗಳಿಂದ ದೂರ ಇರುವ ಕಾಯಕಶೀಲನಾಗಿರುವವನೇ ನಿಜವಾದ ಗುರು ಎಂದರು.ಲಿಂಗಾಯತ ಧರ್ಮದ ಗುರು ಬಸವಣ್ಣ, ಧರ್ಮದ ಗ್ರಂಥ ವಚನ ಸಾಹಿತ್ಯ, ಧರ್ಮದ ಕ್ಷೇತ್ರ ನಾವಿರುವ ಸ್ಥಳ. ಲಿಂಗಾಯತ ಧರ್ಮದಲ್ಲಿ ಸ್ಥಾವರ ದೇವರನ್ನು ಪೂಜಿಸುವ ಅವಶ್ಯಕತೆ ಇಲ್ಲ. ಜಾತಿ ಕಿತ್ತಾಕಿ ನೀತಿ ಬೆಳೆಸಿಕೊಳ್ಳುವುದು ದೀಕ್ಷೆ ಮುಖ್ಯ ಉದ್ದೇಶ. ತಂದೆ-ತಾಯಿಯಿಂದ ಪಡೆದದ್ದು ನರಜನ್ಮ, ಗುರುವಿನಿಂದ ಪಡೆದುಕೊಂಡಿದ್ದು ಹರ ಜನ್ಮ. ಪ್ರತಿಯೊಬ್ಬರು ಬಹಿರಂಗದ ಶುಚಿತ್ವಕ್ಕಿಂತ ಅಂತರಂಗ ಶುಚಿತ್ವ ಮಾಡಿಕೊಳ್ಳಬೇಕು. ಆಂತರಿಕ ಶುಚಿತ್ವವೆ ಲಿಂಗದೀಕ್ಷೆ. ಒಬ್ಬ ವ್ಯಕ್ತಿ ಶಕ್ತಿಯಾಗುವಂಥದ್ದು ಲಿಂಗಾಯತ ಧರ್ಮದಲ್ಲಿದೆ ಎಂದರು. ಮಠದ ವಿದ್ಯಾರ್ಥಿಗಳು ಲಿಂಗದೀಕ್ಷೆ ವ್ಯವಸ್ಥೆ ಮಾಡಿದರು.