ರಾಮಾಯಣ ಮೌಲ್ಯವನ್ನು ಅಳವಡಿಸಿಕೊಳ್ಳೋಣ

| Published : Oct 08 2025, 01:00 AM IST

ಸಾರಾಂಶ

ಜಗತ್ತಿನ ಮಹಾಕಾವ್ಯಗಳಲ್ಲಿ ಒಂದಾಗಿರುವ ರಾಮಾಯಣದಂತಹ ಪವಿತ್ರಗ್ರಂಥ ಸೃಷ್ಠಿಸುವ ಮೂಲಕ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ರಾಮರಾಜ್ಯದ ಪರಿಕಲ್ಪನೆಯನ್ನು ನೀಡಿದ್ದಾರೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಗತ್ತಿನ ಮಹಾಕಾವ್ಯಗಳಲ್ಲಿ ಒಂದಾಗಿರುವ ರಾಮಾಯಣದಂತಹ ಪವಿತ್ರಗ್ರಂಥ ಸೃಷ್ಠಿಸುವ ಮೂಲಕ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ರಾಮರಾಜ್ಯದ ಪರಿಕಲ್ಪನೆಯನ್ನು ನೀಡಿದ್ದಾರೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.

ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತಲಿನ ಪರಿಸರದಲ್ಲಿದ್ದ ಋಷಿಗಳ ತಪೋವನದಿಂದ ಜ್ಞಾನ ಸಂಪಾದನೆ ಮಾಡಿದ ವಾಲ್ಮೀಕಿ ಶ್ರೇಷ್ಠ ಋಷಿಗಳೇ ಆಗಿದ್ದಾರೆ ಎಂದರು.

ರಾಮರಾಜ್ಯದ ಪರಿಕಲ್ಪನೆ ಎಂದರೆ ಮಹಿಳೆಯರು, ಪುರುಷರು ಸೇರಿದಂತೆ ಎಲ್ಲರಿಗೂ ಸಮಾನತೆ ಕಲ್ಪಿಸುವುದೇ ಆಗಿದೆ. ಎಲ್ಲಾ ಜನರು ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಅವಕಾಶ ನೀಡುವುದೇ ಆಗಿದೆ. ಬುದ್ಧ, ಬಸವ, ಅಂಬೇಡ್ಕರ್ ಆಶಯಗಳು ಕೂಡ ಇದೇ ಆಗಿತ್ತು. ಜನರು ಮೂಢನಂಬಿಕೆ, ಕಂದಾಚಾರ ಬಿಡಿ, ನಮ್ಮ ಮುಂದೆ ಶ್ರೇಷ್ಠ ಸಂವಿಧಾನವಿದೆ. ರಾಮಾಯಣವನ್ನು ಎಲ್ಲರೂ ಓದಿ, ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ, ಮಹರ್ಷಿ ವಾಲ್ಮೀಕಿ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯೋಣ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ಸಮಾಜದಲ್ಲಿ ರಾಜ ಹಾಗೂ ಪ್ರಜೆಗಳ ನಡೆ-ನುಡಿ, ರೀತಿ ನೀತಿ ಹೇಗಿರಬೇಕು ಎಂಬ ಅದರ್ಶ ಪರಿಕಲ್ಪನೆಯನ್ನು ತಿಳಿಸಿಕೊಟ್ಟಿದ್ದಾರೆ. ರಾಮರಾಜ್ಯದಲ್ಲಿ ಪ್ರಜೆಗಳ ಮಾತಿಗೂ ಬೆಲೆ ಇತ್ತು. ಪಿತೃವಾಕ್ಯ ಪರಿಪಾಲನೆಯು ಮುಖ್ಯವಾಗಿತ್ತು. ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ. ಮುಂದಿನ ವರ್ಷದೊಳಗೆ ನಗರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯೂ ನಿರ್ಮಾಣವಾಗಲಿದೆ ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತನಾಯಕ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಈ ನೆಲದ ಸಂಸ್ಕೃತಿ ರೂಪಿಸಿ ಪರಿಚಯಿಸುವ ಮೂಲಕ ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸಿದರು. ಜಯಂತಿ ಆಚರಣೆ ಒಂದು ಸಮುದಾಯಕ್ಕೆ ಸೀಮಿತವಾಗಬಾರದು, ವರ್ಷದಿಂದ ವರ್ಷಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಯು ಪರಿಪೂರ್ಣತೆ ಹೊಂದಲು ವಾಲ್ಮೀಕಿಯವರ ರಾಮನನ್ನು ಅನುಸರಿಸಬೇಕು ಎಂದರು.

ರಾಮಾಯಣ ಕೇವಲ ರಾವಣನ ಕೊಂದ ಕಥೆಯಲ್ಲ, ಅದು ಈ ನೆಲದ ಅವಿಭಕ್ತ ಕುಟುಂಬದ ಕಲ್ಪನೆ, ಅಣ್ಣ-ತಮ್ಮಂದಿರ ಬಾಂಧವ್ಯವನ್ನು ಅಚ್ಚುಕಟ್ಟಾಗಿ ವಾಲ್ಮೀಕಿಯವರು ಕಟ್ಟಿಕೊಟ್ಟಿದ್ದಾರೆ. ರಾಮನನ್ನು ಸಾಮರಸ್ಯದ ಪ್ರತೀಕವಾಗಿ ವಾಲ್ಮೀಕಿಯವರು ಸೃಷ್ಠಿಸುವ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದರೆ ತಪ್ಪಾಗಲಾರದು. ವಾಲ್ಮೀಕಿ ನಿಜವಾದ ರಾಮರಾಜ್ಯ, ಗ್ರಾಮ ಪಂಚಾಯಿತಿ ಕಲ್ಪನೆಯನ್ನು ಅಂದಿನ ಕಾಲದಲ್ಲೇ ನೀಡಿದ್ದಾರೆ. ಈ ದೇಶದಲ್ಲಿ ಶೇ. ೯೦ರಷ್ಟು ಜನರು ರಾಮಾಯಣವನ್ನು ಓದಿಲ್ಲ. ರಾಮಾಯಣ ಓದಿ ಮಹರ್ಷಿ ವಾಲ್ಮೀಕಿಯವರನ್ನು ಎದೆಗಿಳಿಸಿಕೊಳ್ಳುವ ಮೂಲಕ ನಾವೆಲ್ಲರೂ ಸ್ವಾಭಿಮಾನಿಗಳಾಗಬೇಕು ಎಂದು ತಿಳಿಸಿದರು.

ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಚಾಲನೆ:

ನಗರದ ಪ್ರವಾಸಿ ಮಂದಿರದಲ್ಲಿ ಬೆಳ್ಳಿರಥದದಲ್ಲಿ ಇರಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮಂಗಳವಾದ್ಯ, ಡೊಳ್ಳುಕುಣಿತ, ಗೊರುಕನ ನೃತ್ಯ, ಗಾರುಡಿಗ ಗೊಂಬೆ, ಕೊಂಬು ಕಹಳೆ, ತಮಟೆ ಹಾಗೂ ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ನಡೆದ ಮರೆವಣಿಗೆಯು ಪ್ರವಾಸಿ ಮಂದಿರದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಭುವನೇಶ್ವರಿ ವೃತ್ತದ ಮೂಲಕ ಪೇಟೆ ಪ್ರೈಮರಿ ಶಾಲೆ ತಲುಪಿತು.

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಾನಪದ ಕಲಾವಿದರಾದ ಸುರೇಶ್ ನಾಗ್, ಸಾಕಷ್ಟು ಬಾರಿ ರಕ್ತದಾನ ಮಾಡಿದ ಮಧುಸೂಧನ್ ಮತ್ತು ಪತ್ರಕರ್ತರಾದ ಜಿ. ಬಂಗಾರು ಹಾಗೂ ಶ್ರೀನಿವಾಸನಾಯಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಸದಸ್ಯರಾದ ಕಲಾವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ ಉಪಸ್ಥಿತರಿದ್ದರು.