ಡೊಳ್ಳು ಕುಣಿತಕ್ಕೆ ಬರೀ ಡೊಳ್ಳಿದ್ದರೆ ಸಾಲದು ಬಾರಿಸೋಕೆ ಕೋಲು ಬೇಕು, ನಡುವನ್ನು ಬಳಸಿ ಕಟ್ಟಲು ಹಗ್ಗ ಬೇಕು, ಆದಾಗ ಡೊಳ್ಳು ಕುಣಿತ ಮಾಡಲು ಸಾಧ್ಯ, ಕನ್ನಡವನ್ನು ಕಟ್ಟಲು, ಉಳಿಯಲು, ಬೆಳೆಯಲು ಇಂತಹ ಸಂಘ ಸಂಸ್ಥೆಗಳು ಮುಖ್ಯ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ಜ್ಞಾನವೀಣೆ ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ದಿನಾಚರಣೆ ಹಾಗೂ ಜನಪದ ನೃತ್ಯ ಮತ್ತು ಗಾನೋತ್ಸವ ಕಾರ್ಯಕ್ರಮ ನಡೆಯಿತು.

ಪಟ್ಟಣದ ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಜನಪದ ನೃತ್ಯ ಮತ್ತು ಗಾಯನ ಕಾರ್ಯಕ್ರಮವನ್ನು ಪ್ರಗತಿ ಪರ ರೈತ ಮತ್ತು ದಸರಾ ಉದ್ಘಾಟಕರಾದ ಮಲಾರ ಪುಟ್ಟಯ್ಯ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ರೈತನಾಗಲಿ, ಕಾರ್ಮಿಕನಾಗಲಿ, ನೌಕರರಾಗಲಿ ಕನ್ನಡ ಕಟ್ಟುವಂಥ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜ್ಞಾನ ವೀಣೆ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಜನಪದ ಕಲಾ ಪ್ರಕಾರಗಳಾದ ನೃತ್ಯ, ಹಾಡುಗರಿಕೆ, ಡೊಳ್ಳು ಕುಣಿತ ಇನ್ನಿತರ ಚಟುವಟಿಕೆಗಳು ಇವತ್ತಿನ ಕಾರ್ಯಕ್ರಮಕ್ಕೆ ಸಾಕ್ಷಿ, ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಇಂತಹ ಕಲೆಗಳನ್ನು ಕಲಿಸಲು ಜವಾಬ್ದಾರಿ ವಹಿಸಬೇಕು ಎಂದರು.

ಡೊಳ್ಳು ಕುಣಿತಕ್ಕೆ ಬರೀ ಡೊಳ್ಳಿದ್ದರೆ ಸಾಲದು ಬಾರಿಸೋಕೆ ಕೋಲು ಬೇಕು, ನಡುವನ್ನು ಬಳಸಿ ಕಟ್ಟಲು ಹಗ್ಗ ಬೇಕು, ಆದಾಗ ಡೊಳ್ಳು ಕುಣಿತ ಮಾಡಲು ಸಾಧ್ಯ, ಕನ್ನಡವನ್ನು ಕಟ್ಟಲು, ಉಳಿಯಲು, ಬೆಳೆಯಲು ಇಂತಹ ಸಂಘ ಸಂಸ್ಥೆಗಳು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀವಿಕ ಜಿಲ್ಲಾ ಸಂಚಾಲಕ ಬಸವರಾಜು ಮಾತನಾಡಿ, ಗಡಿನಾಡ ಅಂಚಿನಲ್ಲಿ ವಾಸ ಮಾಡುವ ನಾವು ಕನ್ನಡಕ್ಕೆ ಹೆಚ್ಚು ಒತ್ತು ಕೊಡಬೇಕು, ಭಾಷೆಯಾಗಲಿ, ಸಾಹಿತ್ಯವಾಗಲಿ, ಕಲೆ, ಸಂಸ್ಕೃತಿ ಇವೆಲ್ಲವನ್ನೂ ಮರೆತು ಹೋಗುತ್ತಿದ್ದೇವೆ. ಇವತ್ತಿನ ಟಿವಿ, ಮೊಬೈಲ್ ಗಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತಿವೆ. ಹಾಗಾಗಿ ಕನ್ನಡಕ್ಕೆ ಮತ್ತು ಜಾನಪದಕ್ಕೆ ಹೆಚ್ಚಿನ ಆದ್ಯತೆ ಕೊಡೋಣ ಜೊತೆಗೆ ನಮ್ಮ ಸಂವಿಧಾನವನ್ನು ನಾವು ಉಳಿಸಿ ಕೊಳ್ಳಬೇಕಾದರೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಂವಿಧಾನ ದಿನಾಚರಣೆ ಶುಭಾಶಯ ಕೋರಿದರು.

ಚಾ. ನಂಜುಂಡ ಮೂರ್ತಿ, ಜೀವಿಕ ಬಸವರಾಜ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಅರುಣ್ ಕುಮಾರ್, ಪತ್ರಿಕೆ ವರದಿಗಾರ ಶಿವಲಿಂಗ ಹ್ಯಾಂಡ್ ಪೋಸ್ಟ್, ವಿಷ್ಣು ಸೇನೆ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್, ಗ್ರಾಪಂ ಸದಸ್ಯ ಚಂದ್ರು,

ಕಸ್ತೂರಿ ಬಾ ಬಾಲಕಿಯರ ನಿಲಯ ಪಾಲಕಿ ಛಾಯಾದೇವಿ, ಕೆ.ಜಿ. ಹಳ್ಳಿ ಶಾಲಾ ಶಿಕ್ಷಕ ಚಿಕ್ಕಣ್ಣ, ರಂಗಸ್ವಾಮಿ, ಟ್ರಸ್ಟ್ ಅಧ್ಯಕ್ಷ ಹಾಗೂ ಕಲಾವಿದ ದೇವರಾಜು, ಮಹಿಳೆಯರು, ಮಕ್ಕಳು ಇದ್ದರು.