ಸಾರಾಂಶ
ಕನಕಪುರ: ಒಂದು ನಗರ ಸುಂದರ ಹಾಗೂ ಆರೋಗ್ಯಕರ ವಾತಾವರಣದಿಂದ ಕೂಡಿರಲು ಸ್ವಚ್ಛತಾ ಸಿಬ್ಬಂದಿ, ಪೌರಕಾರ್ಮಿಕರ ಪಾತ್ರ ಬಹಳ ಮುಖ್ಯವೆಂದು ರಾಜ್ಯ ಸಂಪನ್ಮೂಲ ಅಧಿಕಾರಿ ಪರಶುರಾಮಯ್ಯ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವಟೇಸಿಂಗ್ಸಹಕಾರದಲ್ಲಿ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ರಾಷ್ಟ್ರೀಯ ಕಾರ್ಯಾಗಾರವನ್ನು ಆರಂಭಿಸಿದ್ದು ಇದರ ಮುಖ್ಯ ಧ್ಯೇಯ ಬಯಲು ಮಲವಿಸರ್ಜನೆ ನಿರ್ಮೂಲನೆ, ಘನ ತ್ಯಾಜ್ಯ ನಿರ್ವಹಣೆ ಸುಧಾರಣೆ ಮೂಲಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಸ್ವಚ್ಛತಾ ಪರಿಸರವನ್ನು ನಿರ್ಮಾಣ ಮಾಡುವುದರ ಜೊತೆಗೆ ಪರಿಸರಕ್ಕೆ ಮಾರಕವಾಗಿರುವ ಘನತ್ಯಾಜ್ಯ ನಿರ್ವಹಣೆ ಸುಧಾರಿಸುವುದು ಮುಖ್ಯ ಗುರಿ ಎಂದು ತಿಳಿಸಿದರು.
ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆಯಲ್ಲಿ ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆ ವಾಹನಗಳಲ್ಲಿಯೇ ಹಾಕಬೇಕು. ಪೌರಕಾರ್ಮಿಕರು ದೇಶದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಅವರು ಕೈಗೊಳ್ಳುವ ಸ್ವಚ್ಛತೆಯಿಂದ ಸುಂದರ ನಗರ ನಿರ್ಮಾಣ ಮಾಡಬಹುದು ಎಂದು ಸ್ವಚ್ಛತಾ ನೌಕರರಲ್ಲಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಜಾಗೃತಿ ಮೂಡಿಸಿದರು.ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ(ಪರಿಸರ) ಧನಂಜಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಭಾರತ ಸರ್ಕಾರ ರಾಷ್ಟೀಯ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಅ. 2, 2014ರಂದು ಪ್ರಾರಂಭಿಸಿ, ಅಲ್ಲಿಂದ ಇಲ್ಲಿಯವರೆಗೆ ಭಾರತವನ್ನು ಸ್ವಚ್ಛವಾಗಿಡಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾವೂ ಸಹ ವೈಜ್ಞಾನಿಕವಾಗಿ ಕಸ ವಿಲೇವಾರಿ ನಿರ್ವಹಣೆ ಮಾಡಬೇಕಾಗಿದೆ. ನಗರದ ಸ್ವಚ್ಛತೆ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಿದ್ದು ಯೋಜನೆ ಕಾರ್ಯಗತಕ್ಕೆ ನೌಕರರು, ಸಿಬ್ಬಂದಿ ಜೊತೆ ನಗರದ ಸಾರ್ವಜನಿಕರು ಸಹ ಘನತ್ಯಾಜ್ಯ ನಿರ್ವಹಣೆಯಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಗರಸಭಾ ಅಧ್ಯಕ್ಷೆ ಹೇಮಾರಾಜು ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತಹ ಕೆಲಸವನ್ನು ನಿರ್ವಹಿಸಬೇಕು. ಈ ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿರುವ ಸ್ವಚ್ಛತಾ ನೌಕರರು ಅರಿವು ಪಡೆದುಕೊಂಡು ನಗರದ ಸ್ವಚ್ಛತೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.ಈ ವೇಳೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ನಗರಸಭೆಯ ಮಾಜಿ ಕಿರಣ್, ಸದಸ್ಯರಾದ ಸರಳ, ರಾಜೇಶ್ವರಿ, ಪದ್ಮಮ್ಮ, ವಿಜಯ ಕುಮಾರ್, ರಾಮದಾಸ್, ನಾಗರಾಜು, ಮುಕುಂದರಾವ್, ವಿರೇಶ್, ಸ್ವಪ್ಸ್ ನಿರ್ದೇಶಕ ನಾರಾಯಣ್, ನಗರಸಭಾ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದ ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರಿಗಾಗಿ ಘನತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತಾ ಅರಿವು ಕಾರ್ಯಾಗಾರ ನಡೆಯಿತು.