ಎಲ್ಲರೂ ಒಟ್ಟಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸೋಣ

| Published : Feb 10 2024, 01:50 AM IST / Updated: Feb 10 2024, 05:03 PM IST

ಎಲ್ಲರೂ ಒಟ್ಟಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿವಾಗಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರಕರಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕುರಿತು ತರಬೇತಿ ಕಾರ್ಯಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಲ್ಲರೂ ಒಟ್ಟಾಗಿ ಸೇರಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ-2024 ಯಶಸ್ವಿಗೊಳಿಸೋಣ ಎಂದು ಜಿಲ್ಲಾ ಆರ್.ಸಿ.ಎಚ್.‌ ಅಧಿಕಾರಿ ಡಾ.ಅಭಿನವ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸಿ ಪೋಲಿಯೋ ರೋಗದ ಮೇಲೆ ವಿಜಯ ಸಾಧಿಸಿ. ಪೋಲಿಯೋ ಮುಕ್ತ ಭಾರತವೆಂದು 2014ರಲ್ಲೇ ಘೋಷಣೆಯಾಗಿದ್ದರೂ ಅಕ್ಕಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನಗಳಲ್ಲಿ ಪ್ರಚಲಿತ ಪೋಲಿಯೋ ಪ್ರಕರಣಗಳು ಇರುವುದರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಮತ್ತೆ ಪೋಲಿಯೋ ಮರುಕಳಿಸದಂತೆ ಮುನ್ನೆಚ್ಚರಿಕೆ ಲಸಿಕಾ ಅಭಿಯಾನವಾಗಿದೆ ಎಂದು ಹೇಳಿದರು.

ದೈನಂದಿನ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಲಸಿಕೆ ಮಕ್ಕಳಿಗೆ ನೀಡಲಾಗುತ್ತಿದೆ. ರಕ್ಷಣಾ ವ್ಯವಸ್ಥೆ ಬಲಪಡಿಸಲು ಇನ್ನು ಕೆಲವು ವರ್ಷ ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನವನ್ನು ದೇಶಾದಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

2022ರ ಫೆಬ್ರುವರಿ ತಿಂಗಳಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 1,50,054 ಮಕ್ಕಳನ್ನು ಗುರುತಿಸಿ, 1091 ನಿಗಧಿತ ಬೂತ್, 71 ಪ್ರಯಾಣಿಕರು ಸಂಚರಿಸುವ ಸ್ಥಳಗಳ ಬೂತ್, 16 ಸಂಚಾರಿ ಬೂತ್‍ಗಳ ಸ್ಥಾಪನೆ ಮಾಡಿದ್ದು, 2355 ವ್ಯಾಕ್ಸಿನೇಟರ್ಸ್, 254 ಜನ ಮೇಲ್ವಿಚಾರಕರಣ ತಂಡಗಳು ಕ್ರಿಯಾಯೋಜನೆಯಂತೆ ಕಾರ್ಯನಿರ್ವಹಿಸಿ, ಯಶಸ್ವಿ ಸಾಧನೆ ಮಾಡಲಾಗಿತ್ತು. 

ಅದರಂತೆ 2024ರ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕ್ರಿಯಾಯೋಜನೆ ತಯಾರಿಸಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಕಳಿಸಿಕೊಡಬೇಕು. ಎಲ್ಲಾ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಗುರುತಿಸಿ ಸೇವೆ ಒದಗಿಸಬೇಕು. ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕ್ರಿಯಾಯೋಜನೆಯಲ್ಲಿ ಬಳಕೆ ಆಗುವ ನಮೂನೆ ತುಂಬುವ ವಿಧಾನವನ್ನು ಪ್ರಾತ್ಯಕ್ಷಿಕೆ ನೀಡಿದರು.

ತರಬೇತಿ ಕಾರ್ಯಗಾರದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ್, ಬಿ.ಮೂಗಪ್ಪ, ಎಂ.ಎಚ್.ಚಂದ್ರಶೇಖರ್ ನಾಯಕ್, ಲಲಿತಮ್ಮಾ, ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರೆಡ್ಡಿ, ಶ್ರೀಧರ್, ಗುರುಮೂರ್ತಿ, ಡಿಎನ್‍ಓ ಶಾಂತಮ್ಮ, ಜಿಲ್ಲಾ ವ್ಯವಸ್ಥಾಪಕರಾದ ಪ್ರಫುಲ್ಲ, ದಸ್ತಗೀರ್ ಸಾಬ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇದ್ದರು.